ಕ್ಷೀರಭಾಗ್ಯದಿಂದ ಮಕ್ಕಳ ಆರೋಗ್ಯ ಸುಧಾರಣೆ

Updated on

ತುಮಕೂರು: ಕ್ಷೀರಭಾಗ್ಯ ಯೋಜನೆಯಿಂದ ಅಪೌಷ್ಟಿಕತೆ ಕಡಿಮೆಯಾಗಿ, ಮಕ್ಕಳ ಆರೋಗ್ಯ ಸುಧಾರಣೆ ಆಗುತ್ತಿದೆ ಎಂದು ತುಮಕೂರು ಹಾಲು ಒಕ್ಕೂಟದ ತುಮಕೂರು ತಾಲೂಕು ನಿರ್ದೇಶಕ ಎಚ್.ಕೆ. ರೇಣುಕಾಪ್ರಸಾದ್ ತಿಳಿಸಿದರು.
ಅವರು ತುಮಕೂರು ತಾಲೂಕು ದೊಡ್ಡನಾರವಂಗಲ ಪ್ರೌಢಶಾಲೆ ಆವರಣದಲ್ಲಿ, ದೊಡ್ಡನಾರವಂಗಲ ಗ್ರಾಪಂ, ಶಿಕ್ಷಣ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ತುಮಕೂರು ಹಾಲು ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ ಕ್ಷೀರ ಭಾಗ್ಯ ಯೋಜನೆಯ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಿಗೆ ಹಾಲು ಅತ್ಯವಶ್ಯಕವಾಗಿದ್ದು, ಮಕ್ಕಳಿಗೆ ಬೇಕಾಗುವ ಪೌಷ್ಟಿಕಾಂಶ ಹಾಲಿನಿಂದ ದೊರೆಯುತ್ತಿದೆ. ಮೆದುಳಿನ ಬೆಳವಣಿಗೆಗೆ ಹಾಲು ಅತ್ಯವಶ್ಯಕವಾಗಿದೆ. ಹಾಲು ಸಂಪೂರ್ಣ ಆಹಾರವಾಗಿದ್ದು, ಎಲ್ಲ ಮಕ್ಕಳಿಗೆ ಸಿಗುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದರು.
ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷರು, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ವಿಜಯ್ರಾಜ್, ವಿಸ್ತಣಾಧಿಕಾರಿ ರಾಜು, ವನಜಾಕ್ಷಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ವನಜಾಕ್ಷಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಅಕ್ಕನಾಗಮ್ಮ ಜಯಂತಿ
ತುಮಕೂರು: ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ, ಬಸವ ಮಹಿಳಾ ಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಅಕ್ಕನಾಗಮ್ಮ ಜಯಂತಿ ಹಾಗೂ ಶಿವಶರಣಪ್ಪ ತರನಹಳ್ಳಿನವರ ಸ್ಮರಣೆ ಕಾರ್ಯಕ್ರಮವನ್ನು ಆ.6 ರಂದು ಸಂಜೆ 6 ಗಂಟೆಗೆ ತುಮಕೂರಿನ ಬಿಎಚ್ ರಸ್ತೆಯಲ್ಲಿರುವ ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಡಿ.ಎನ್. ಯೋಗೀಶ್ ಉಪನ್ಯಾಸ ನೀಡಲಿದ್ದಾರೆ. ತುಮಕೂರು ಬಸವ ಕೇಂದ್ರದ ಅಧ್ಯಕ್ಷೆ ಸಿದ್ದಗಂಗಮ್ಮ ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸುವರು. ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯವನ್ನು ವಹಿಸಲಿದ್ದಾರೆ.
ರಾಘವೇಂದ್ರ  ಆರಾಧನ ಮಹೋತ್ಸವ ಇಂದಿನಿಂದ
ತುಮಕೂರಿನ ಶೆಟ್ಟಿಹಳ್ಳಿ ರೈಲ್ವೆಗೇಟ್ ಬಳಿಯಿರುವ ರಾಘವೇಂದ್ರ ಸೇವಾ ಸಮಿತಿ ವತಿಯಿಂದ ರಾಘವೇಂದ್ರ ಗುರು ಸಾರ್ವಭೌಮರ 343ನೇ ಆರಾಧನಾ ಮಹೋತ್ಸವವನ್ನು ಆ.6 ರಿಂದ 16 ರವರೆಗೆ ಪ್ರತಿದಿನ ಸಂಜೆ 6-30 ರವರೆಗೆ ಹಮ್ಮಿಕೊಳ್ಳಲಾಗಿದೆ.
ಆ.6ರಂದು ಸುಧಾ ಮುರಳಿ ಪ್ರಭಾಮಣಿ ಅವರಿಂದ ಗಮಕ, 7ರಂದು ದೇವರನಾಮ, 14ರಂದು ತುಮಕೂರಿನ ಮನ್ವಿತ, ವರ್ಣಿತಾ ಅವರಿಂದ ದೇವರ ನಾಮ, 15ರಂದು ತುಮಕೂರಿನ ನರಸಿಂಹಮಂದಿರದ ರುಕ್ಮಿಣಿ ಗೋಪಾಲ್ ಅವರಿಂದ ವೀಣಾವಾದನ, 16 ರಂದು ಅನಘಪ್ರಸಾದ್ ಅವರಿಂದ ಹರಿಕಥೆ ಕಾರ್ಯಕ್ರಮ ಏರ್ಪಾಟಾಗಿದೆ.
ಕುರಿ ಸಾಕಾಣೆ ತರಬೇತಿ ಇಂದು, ನಾಳೆ
ತುಮಕೂರಿ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಪಶು ವೈದ್ಯ ಪರೀಕ್ಷಕರ ತರಬೇತಿ ಕೇಂದ್ರದ ವತಿಯಿಂದ ಕುರಿ ಸಾಕಣೆ ಉಚಿತ ತರಬೇತಿ ಕಾರ್ಯಕ್ರಮವನ್ನು ಆ.6 ಹಾಗೂ 7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಆ.6 ರಂದು ಬೆಳಗ್ಗೆ 10-30ಕ್ಕೆ ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಪಶು ವೈದ್ಯ ಪರೀಕ್ಷಕರ ಕಚೇರಿ ಆವರಣಕ್ಕೆ ಆಸಕ್ತರು ಬರುವಂತೆ ಕೋರಲಾಗಿದೆ. ತರಬೇತಿ ಅವಧಿಯಲ್ಲಿ ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಮಾಹಿತಿಗೆ ದೂ. 0816 - 2251214 ಸಂಪರ್ಕಿಸುವಂತೆ ಕೋರಲಾಗಿದೆ.
ಶ್ರಾವಣಮಾಸ ಪೂಜಾ ಮಹೋತ್ಸವ
ತುಮಕೂರಿನ ಚಿಕ್ಕಪೇಟೆಯ ತೋಟದ ರಸ್ತೆಯ ಕಲ್ಪತರು ವನದಲ್ಲಿರುವ ಘನನೀಲ ಶನೈಶ್ಚರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ 34ನೇ ವರ್ಷದ ಶ್ರಾವಣ ಮಾಸಾ ಪೂಜಾ ಮಹೋತ್ಸವವನ್ನು ಇಡೀ ತಿಂಗಳು ಹಮ್ಮಿಕೊಳ್ಳಲಾಗಿದೆ. ಆ.9 ರಂದು ಮಧ್ಯಾಹ್ನ 12 ಗಂಟೆಗೆ, ಆ.16 ಹಾಗೂ ಆ. 23ರಂದು ಬೆಳಗ್ಗೆ 7 ರಿಂದ 10-30 ರವರೆಗೆ ವಿಶೇಷ ಪೂಜೆ, ಆ.25ಕ್ಕೆ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪ್ರಶಸ್ತಿ
ತಿಪಟೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ತುಮಕೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಗುಡ್ಡಗಾಡು ಓಟವನ್ನು ಪಾವಗಡದಲ್ಲಿ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ ತಂಡ ಶ್ರೇಷ್ಠ ಪ್ರಶಸ್ತಿ ಪಡೆದಿದೆ. ಪುರುಷರ ವಿಭಾಗದ ಪ್ರಥಮ ಪ್ರಶಸ್ತಿ ಬಿ.ಎಸ್. ರಾಕೇಶ್, ದ್ವಿತೀಯ ಸ್ಥಾನ ಎಂ.ಜಿ. ಕಲ್ಲೇಶಪ್ಪ, ತೃತೀಯ ಸ್ಥಾನ ಟಿ.ಎಂ. ಜಗದೀಶ್ ಪಡೆದರೆ, ಮಹಿಳೆಯರ ವಿಭಾಗದ ಬಿ.ಎನ್. ವಿನುತ ದ್ವಿತೀಯ, ಎಸ್. ಪುಷ್ಪಲತಾ ನಾಲ್ಕನೇ ಸ್ಥಾನ ಮತ್ತು ಪಿ.ಆರ್. ತೇಜ ಐದನೇ ಸ್ಥಾನ ಪಡೆದಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ. ಜಯದೇವಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್ ಕುಮಾರ್, ವ್ಯವಸ್ಥಾಪಕಿ ಎನ್. ರಂಗಲಕ್ಷ್ಮಿ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com