ತುರುವೇಕೆರೆ: ಶೌಚಾಲಯಗಳ ನಿರ್ಮಾಣದ ಬಾಕಿ ಹಣವನ್ನು ಚೆಕ್ ಮೂಲಕ ನೀಡಲು ಸತಾಯಿಸುತ್ತಿದ್ದುದನ್ನು ಖಂಡಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿಯಲು ಮುಂದಾದ ಕಾರಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೂಡಲೇ ಚೆಕ್ಗೆ ಸಹಿ ಮಾಡಿದ ಘಟನೆ ತಾಲೂಕಿನ ಲೋಕಮ್ಮನಹಳ್ಳಿಯಲ್ಲಿ ನಡೆದಿದೆ.
ಲೋಕಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 43 ಮಂದಿಗೆ ಶೌಚಾಲಯ ನಿರ್ಮಾಣದ ಬಾಕಿ ಹಣ ನೀಡಬೇಕಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಫಲಾನುಭವಿಗೆ ರು. 4500 ನೀಡಲಾಗಿತ್ತು. ಆದರೆ ನಿರ್ಮಲ್ ಭಾರತ್ ಯೋಜನೆಯಡಿ ನೀಡಬೇಕಿದ್ದ ಸುಮಾರು ರು. 4700 ಗಳನ್ನು ನೀಡಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಶೌಚಾಲಯಗಳ ನಿರ್ಮಾಣವಾಗಿ ಮೂರು ತಿಂಗಳು ಕಳೆದಿದೆ. ಈ ಕುರಿತು ಕಾರ್ಯದರ್ಶಿ ಸ್ಥಳ ಮಹಜರು ಮಾಡಿ ಅಂತಿಮ ವರದಿ ಸಹ ನೀಡಿದ್ದಾರೆ. ಕಳೆದ 2 ಸಾಮಾನ್ಯ ಸಭೆಗಳಲ್ಲಿ ಫಲಾನುಭವಿಗಳಿಗೆ ಚೆಕ್ ನೀಡಿ ಎಂದು ಸದಸ್ಯರು ತಿಳಿಸಿದರೂ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ ಚೆಕ್ಗೆ ಸಹಿ ಹಾಕದೇ ಸತಾಯಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾ ಮುಖ್ಯಕಾರ್ಯದರ್ಶಿಗೂ ದೂರು ಸಲ್ಲಿಸಲಾಗಿತ್ತು. ಏನೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ನಡೆಯುತ್ತಿದ್ದ ವಿಶೇಷ ಸಭೆಯ ವೇಳೆ ಕೆಲವು ಗ್ರಾಪಂ ಸದಸ್ಯರು ಹಾಗೂ ಫಲಾನುಭವಿಗಳೆಲ್ಲರೂ ಸೇರಿ ಗ್ರಾಪಂ ಕಚೇರಿಗೆ ಬೀಗ ಜಡಿಯಲು ಮುಂದಾಗಿದ್ದರು. ಮುಂದಾಗಬಹುದಾದ ಸಮಸ್ಯೆ ಅರಿತ ಅಧ್ಯಕ್ಷೆ ಮಂಗಳಮ್ಮ, ಬಾಕಿ ಇದ್ದ ಎಲ್ಲ ಚೆಕ್ಗಳಿಗೆ ಸಹಿ ಮಾಡುವ ಭರವಸೆ ನೀಡಿದ್ದೇ ಅಲ್ಲದೇ ಸ್ಥಳದಲ್ಲೇ ಸಹಿ ಹಾಕಿ ನೀಡಿದರು.
Advertisement