ತುಮಕೂರು: ತುಮಕೂರು ತಾಲೂಕು ಊರುಕೆರೆ ಗ್ರಾಮ ಪಂಚಾಯಿತಿ ಪಿಡಿಒ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ನೇತೃತ್ವದಲ್ಲಿ ಗ್ರಾ.ಪಂ. ಸದಸ್ಯರು ಜಿಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪಂಚಾಯಿತಿಯ ಅನಧಿಕೃತ ಬಡಾವಣೆಗಳು ಹಾಗೂ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಖಾತೆಗಳನ್ನು ಮಾಡಿಕೊಡುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟವನ್ನುಂಟು ಮಾಡುತ್ತಿದ್ದಾರೆ. ಈ ಸಂಬಂಧ ಶೀಘ್ರ ತನಿಖೆ ನಡೆಸುವಂತೆ ಶಾಸಕರು ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆ ನಡೆಸಿದ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಈ ಸಂಬಂಧ ಪಿಡಿಒ, ಇಒ, ಸಿಎಸ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶಾಸಕ ಬಿ. ಸುರೇಶ್ಗೌಡ ಮಾತನಾಡುತ್ತ, ಊರುಕೆರೆ ಗ್ರಾಮ ಪಂಚಾಯಿತಿಯ ಪಿಡಿಒ ಜೆ.ಆರ್. ಜ್ಯೋತಿ ಅವರು ಗ್ರಾಮಸ್ಥರ ಕೆಲಸಗಳನ್ನು ನಿರ್ವಹಿಸದೆ, ಗ್ರಾಮಸ್ಥರನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಸಂಬಂಧ ಧ್ವನಿಎತ್ತಿದ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪೊಲೀಸರಿಗೆ ದೂರು ನೀಡಿ ಜೈಲಿಗೆ ಹಾಕಿರುವಂತಹ ಪಿಡಿಒ ವಿರುದ್ಧ ತನಿಖೆ ನಡೆಸಬೇಕು. ತನಿಖೆ ನಡೆಸುವವರೆಗೆ ಪಿಡಿಒ ಅವರನ್ನು ಅಮಾನತಿನಲ್ಲಿಡುವಂತೆ ಆಗ್ರಹಿಸಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳು ಅಲ್ಲಿನ ಗ್ರಾಪಂ ಅಧ್ಯಕರು ಹಾಗೂ ಸದಸ್ಯರ ಸಹಭಾಗಿತ್ವದಲ್ಲಿ ನಡೆಯಬೇಕು. ಎಲ್ಲದ್ದಕ್ಕೂ ಗ್ರಾ.ಪಂ. ಸದಸ್ಯರು ಹಾಗೂ ಅಧ್ಯಕ್ಷರೇ ಸುಪ್ರೀಮ್ ಎಂಬ ಕಾನೂನು ಸಹ ಇದೆ. ಆದರೆ, ತುಮಕೂರಿನ ಊರುಕೆರೆ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಈ ಕಾನೂನು ಅನ್ವಯಿಸುತ್ತಿಲ್ಲ. ಇಲ್ಲಿನ ಪಿಡಿಒ, ಇಒ, ಸಿಎಸ್ಗಳು ಡಿಸಿ ಅಲಿಗೇಷನ್ ಆಗಿರುವ ಕೋಟ್ಯಂತರ ರು. ಮೌಲ್ಯದ ಭೂಮಿಯನ್ನು ಖಾತೆ ಮಾಡಿ ವಿನ್ಯಾಸಗೊಳಿಸಿ ಮರುಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಆದರೆ ನಮೂನೆ-9 ಹಾಗೂ 11ನ್ನು ನೀಡುವಾಗ ಪಿಡಿಒ, ಇಒ, ಸಿಎಸ್ ಮೂಲಕವೇ ನೀಡಲಾಗುವುದರಿಂದ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸುರೇಶ್ಗೌಡ ಆಗ್ರಹಿಸಿದರು.
ಊರುಕೆರೆ ಗ್ರಾಪಂ ಪಿಡಿಒ ವರ್ತನೆಯಿಂದ ಇಲ್ಲಿನ ಗ್ರಾಮಸ್ಥರು ಬೇಸತ್ತಿದ್ದು, ಇಲ್ಲಿನ ಸಾರ್ವಜನಿಕ ಕಾರ್ಯಗಳು ಸಂಪೂರ್ಣ ನಿಂತು ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಅನಧಿಕೃತ ನಿವೇಶನಗಳನ್ನು ಖಾತೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ, ಬಡಾವಣೆಗಳ ಮಂಜೂರು ಮಾಡುತ್ತ ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟು ಮಾಡಿದ್ದಾರೆ ಎಂದು ಜಿಪಂ ಸದಸ್ಯ ರವಿಹೆಬ್ಬಾಕ ಆರೋಪಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್. ಉಮೇಶ್, ನಂಜುಂಡಪ್ಪ, ಷಣ್ಮುಗಪ್ಪ, ಶಂಕರಪ್ಪ, ಮಂಜುನಾಥ್, ಚಂದ್ರಪ್ಪ, ರಾಮಕೃಷ್ಣಯ್ಯ, ರಮೇಶ್, ಚಂದ್ರಶೇಖರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Advertisement