ತುಮಕೂರು : ಮಹಿಳೆಯರು ತಮ್ಮ ಕಾರ್ಯ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯ ನಡೆಸುವ ಪುರುಷ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ಭಯವಾಗಿ ದೂರು ನಿವಾರಣಾ ಸಮಿತಿಗೆ ದೂರು ಸಲ್ಲಿಸಬಹುದೆಂದು ಜಿಲ್ಲಾಸ್ಪತ್ರೆಯ ಬಯೋಕೆವುಸ್ಟ್ ಹಾಗೂ ಸಮಿತಿಯ ಅಧ್ಯಕ್ಷೆ ಡಾ. ಸುಜಾತಾ ತಿಳಿಸಿದರು.
ಬಾಲಭವನದಲ್ಲಿ ಜರುಗಿದ ದೂರು ನಿವಾರಣಾ ಸಮಿತಿಯ ಮಾಸಿಕ ಸಭೆಯನ್ನುದ್ದೇಶಿಸಿ ಮಾತಾನಾಡಿದ ಅವರು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಲಾಗಿರುವ ಈ ಸಮಿತಿಯಲ್ಲಿ ನಾನಾ ಇಲಾಖೆಗಳ ಎ, ಬಿ, ಸಿ, ಡಿ ಗುಂಪಿನ ತಲಾ ಇಬ್ಬರು ಸಿಬ್ಬಂದಿ ಇರುತ್ತಾರೆ. ಇವರ ಪೈಕಿ ಒಬ್ಬರು ಅಧ್ಯಕ್ಷ ಹಾಗೂ ಮತ್ತೊಬ್ಬರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಸಮಿತಿಯನ್ನು ಪುನಾರಚಿಸಲಾಗುತ್ತದೆ. ಪ್ರತಿ ತಿಂಗಳ 5ರಂದು ಸಭೆ ನಡೆಸಲಾಗುತ್ತಿದ್ದು, ಇದುವರೆಗೂ ಜಿಲ್ಲೆಯಲ್ಲಿ ಈ ಕುರಿತು ಯಾವುದೇ ದೂರು ವರದಿಯಾಗಿಲ್ಲ ಎಂದು ಅವರು ತಿಳಿಸಿದರು.
ಮಹಿಳೆಯರು ಯಾವುದೇ ರೀತಿಯ ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗುವವರ ವಿರುದ್ಧ ದೂರು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೂರು ಪೆಟ್ಟಿಗೆ ಇಡಲಾಗಿದೆ. ಸಮಿತಿಗೆ ದೂರು ಬಂದಲ್ಲಿ ಚರ್ಚಿಸಿ, ದೂರುದಾರರನ್ನು ಕರೆಸಿ ನಿರ್ಣಯ ಕೈಗೊಂಡು ತನಿಖೆ ಕೈಗೊಳ್ಳಲಾಗುವುದು. ಪ್ರಕರಣಗಳ ತನಿಖೆಯಲ್ಲಿ ಗೌಪ್ಯತೆ ಕಾಪಾಡಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮಹಿಳಾ ಸೆಲ್ನ ಸಬ್ ಇನ್ಸ್ಪೆಕ್ಟರ್ ಪಾರ್ವತಮ್ಮ, ವಾರ್ತಾ ಇಲಾಖೆಯ ಆರ್. ರೂಪಕಲಾ, ಕಾರ್ಮಿಕ ಇಲಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.
ಇವೆಲ್ಲವೂ ದೌರ್ಜನ್ಯಗಳೇ
ಮಹಿಳೆಯರು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಪುರುಷ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳವಲ್ಲದೆ ವಿನಾಕಾರಣ ಪುರುಷ ಅಧಿಕಾರಿ, ಸಿಬ್ಬಂದಿ, ಮಹಿಳಾ ಸಿಬ್ಬಂದಿಗಳ ಮೇಲೆ ರೇಗುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು, ಕೆಟ್ಟ ದೃಷ್ಟಿಯಿಂದ ನೋಡುವುದು, ಅಶ್ಲೀಲವಾಗಿ ಮಾತನಾಡುವುದು, ಮಹಿಳೆಯರಿಗೆ ಸಹಿಸಿಕೊಳ್ಳದಿರುವಂತಹ ಪುರುಷ ಸಿಬ್ಬಂದಿಯ ಹಾವಭಾವಗಳು, ಅಸಭ್ಯವಾಗಿ ವರ್ತಿಸುವುದು, ಕಚೇರಿ ಕೆಲಸದ ವೇಳೆ ಮುಗಿದ ನಂತರ ಕಾರಣವಿಲ್ಲದೆ ಕಚೇರಿಯಲ್ಲಿಯೇ ಉಳಿಸಿಕೊಳ್ಳುವುದು, ಕೌಟುಂಬಿಕ ವಿಚಾರದ ಬಗ್ಗೆ ಟೀಕೆ ಮಾಡುವುದು, ಮೈ-ಕೈ ಮುಟ್ಟಿ ಮಾತನಾಡಿಸುವುದನ್ನೂ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ.
Advertisement