ಚಿಕ್ಕನಾಯಕನಹಳ್ಳಿ: ಸ್ವಾತಂತ್ರೋತ್ಸವದ ಪ್ರಯುಕ್ತ ಹಿರಿಯರಿಗೆ ನಾಗರಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟವನ್ನು ರೊ-ಸಿ.ಎನ್.ಪ್ರದೀಪ್ ಉದ್ಘಾಟಿಸಿದರು. ನಂತರ ಮಾತನಾಡಿ, ಇಳಿವಯಸ್ಸಿನಲ್ಲಿ ಹಿರಿಯರಲ್ಲಿರುವ ಉತ್ಸಾಹ ನಮ್ಮಂಥ ಯುವಕರನ್ನು ನಾಚಿಸುವಂತಿದೆ. ವೃದ್ದಾಪ್ಯದಲ್ಲಿ ನಾವು ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಬೇಕೆಂದರೆ ಚಟುವಟಿಕೆಯಿಂದಿರುವುದು ಅಗತ್ಯ. ಈನಿಟ್ಟಿನಲ್ಲಿ ಹಿರಿಯ ನಾಗರಿಕ ವೇದಿಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ಸಂಗತಿ. ಈ ಕ್ರೀಡಾಕೂಟದಲ್ಲಿ ಹಿರಿಯ ಮನಸ್ಸುಗಳು ಮುದಗೊಳ್ಳುತ್ತವೆ ಎಂದರು. ಸಾಹಿತಿ ಎಂ.ವಿ.ನಾಗರಾಜರಾವ್ ಮಾತನಾಡುತ್ತ, ವಯೋಸಹಜ ದೈಹಿಕ ತೊಂದರೆಗಳಿಗೆ ಕ್ರೀಡೆಯೇ ಮದ್ದು, ಕ್ರೀಡೆಯಿಂದ ಮನಸ್ಸು ಪ್ರಫುಲ್ಲಗೊಳ್ಳುವುದರಿಂದ ದೈಹಿಕ ನೋವುಗಳು ನಗಣ್ಯವಾಗುತ್ತವೆ. ಹೀಗಾಗಿ ಹೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಿದೆ ಎಂದರು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಸರಳ ಕ್ರೀಡೆಗಳನ್ನು ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಹಿರಿಯರು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಸಂಚಾಲಕ ಮಾಧವರಾವ್, ಹಿರಿಯ ವಕೀಲ ಸಿ.ಕೆ. ಸೀತಾರಾಮಯ್ಯ,ಡಾ. ಎಚ್.ಕೆ. ದಾಸ್, ಡಾ. ಪ್ರಶಾಂತಕುಮಾರಶೆಟ್ಟಿ ಹಾಜರಿದ್ದರು.
Advertisement