ಮೊಬೈಲ್ ಟವರ್ಗಳನ್ನು ಊರಾಚೆ ಸ್ಥಾಪಿಸುವಂತೆ ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ರಾಮಕೃಷ್ಣ, ಕರುಣಾರಾಧ್ಯ, ನಾಗರಾಜ್ ಇತರರು ಒತ್ತಾಯಿಸಿದರು. ಅವರು ತುಮಕೂರು ಮಹಾನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, 'ಮೊಬೈಲ್ ಟವರ್ಗಳಿಂದ ಜನತೆ, ಪಶು-ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಟವರ್ಗಳಿಗೆ ತುಮಕೂರು ನಗರದಲ್ಲಿ ಸ್ಥಾಪಿಸಲು ಅವಕಾಶ ಕೊಡಬಾರದೆಂದು ಹಿಂದಿನ ಸಭೆಯಲ್ಲಿ ಒತ್ತಾಯಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಇರುವ ಟವರ್ಗಳ ಜತೆಗೆ ಇನ್ನಷ್ಟು, ಅದೂ ಒಂದೇ ಸ್ಥಳದಲ್ಲಿ ನಾಲ್ಕು ಟವರ್ಗಳನ್ನು ಸ್ಥಾಪಿಸಲು ಅನುಮತಿ ನೀಡಿರುವುದು ಕಾನೂನು ಬಾಹಿರ' ಎಂದು ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. 15ನೇ ವಾರ್ಡ್ನ ಸದಸ್ಯ ಕರುಣಾರಾಧ್ಯ ಮಾತನಾಡಿ, ನಮ್ಮ ವಾರ್ಡ್ನಲ್ಲಿ ಮೊಬೈಲ್ ಟವರ್ ಸ್ಥಾಪಿಸಲು ವಿರೋಧವಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಪಾಲಿಕೆ ಅಧಿಕಾರಿ, ತುಮಕೂರಿನಲ್ಲಿ 120 ಟವರ್ಗಳಿವೆ. ಆದರೆ ಯಾವೊಂದು ಟವರ್ನಿಂದ ರೇಡಿಯೇಷನ್ ತೊಂದರೆಯಿಲ್ಲ, ತಜ್ಞರಿಂದ ಸರ್ಟಿಫಿಕೇಟ್ ಇದೆ ಎಂದರು. ಇದರಿಂದ ಸಿಟ್ಟಿಗೆದ್ದ ಕರುಣಾರಾಧ್ಯ, ಇದೊಂದು ದೊಡ್ಡ ಹಗರಣ. ಟವರ್ಗಳ ಮಾಹಿತಿ ಕೇಳಿ 4 ತಿಂಗಳಾಯಿತು. ಯಾರು ಕೊಟ್ಟಿದ್ದು ಸರ್ಟಿಫಿಕೇಟ್? ಯಾವಾಗ ಕೊಟ್ಟಿದ್ದು? ಸಭೆಗೆ ಮಾಹಿತಿ ನೀಡಿ. ಸರ್ಟಿಫಿಕೇಟ್ ತೋರಿಸಿ ಎಂದು ಒತ್ತಾಯಿಸಿದರು.
ಟಾಸ್ಕ್ ಫೋರ್ಸ್ ರಚನೆಗೆ ಸಮ್ಮತಿ
ಒತ್ತುವರಿ ತೆರವು ಸಂಬಂಧ ಕೂಡಲೇ ಟಾಸ್ಕ್ ಫೋರ್ಸ್ ರಚಿಸುವಂತೆ ಪಾಲಿಕೆ ಸದಸ್ಯರೆಲ್ಲಾ ಒಕ್ಕೊರಲಿನಿಂದ ಮೇಯರ್, ಆಯುಕ್ತರು, ಸಭೆಯಲ್ಲಿ ಪಾಲ್ಗೊಂಡಿದ್ದ ತುಮಕೂರು ನಗರ ಕಾಂಗ್ರೆಸ್ ಶಾಸಕ ಡಾ. ರಫೀಕ್ ಅಹಮದ್ಗೆ ಮನವಿ ಮಾಡಿದರು. ಟಾಸ್ಕ್ ಫೋರ್ಸ್ ರಚಿಸಲು ಸಚಿವರು ಸೇರಿದಂತೆ ಶಾಸಕರು ಸಮ್ಮತಿ ಸೂಚಿಸಿದರು. ಪೊಲೀಸ್ ಬಂದೋಬಸ್ತ್ನಲ್ಲಿ ಒತ್ತುವರಿ ತೆರವುಗೊಳಿಸಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.