ಮಾಲೂರು: ಅಪರಿಚಿತ ಯುವತಿಯೊಬ್ಬಳು ರೈಲಿಗೆ ಸಿಕ್ಕಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ರೇಲ್ವೆ ನಿಲ್ದಾಣ ಸಮೀಪ ಭಾನುವಾರ ನಡೆದಿದೆ. ಪಟ್ಟಣದ ರೇಲ್ವೆ ನಿಲ್ದಾಣ ಹಾಗೂ ರೇಲ್ವೇ ಸೇತುವೆ ನಡುವಿನ ಪ್ರದೇಶದಲ್ಲಿ ಸುಮಾರು 22 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಖ ಹಾಗೂ ತಲೆ ಭಾಗ ಸಂಪೂರ್ಣ ಛಿದ್ರವಾಗಿದೆ. ಯುವತಿ ಹಳದಿ ಮಿಶ್ರಿತ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಾಳೆ. ಬೆಂಗಳೂರಿ ದಂಡು ಪ್ರದೇಶದ ರೇಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರಸುದಾರರು ದಂಡು ಪ್ರದೇಶದ ರೇಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ಪೊಲೀಸ್ ಅಧಿಕಾರಿ ಬೈಲಾಂಜನೇಯ ತಿಳಿಸಿದ್ದಾರೆ.
ಇಬ್ಬರು ಮಹಿಳೆಯರ ಸೆರೆ
ಬಂಗಾರಪೇಟೆ: ಗಾಂಜಾ ಮಾರಾಟ ಮಾರುತ್ತಿದ್ದ ಇಬ್ಬರು ಮಹಿಳೆಯರನ್ನು ಕಾಮಸಮುದ್ರ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಬಲಮಂದೆ ಗ್ರಾಮದ ವೆಂಕಟಮ್ಮ ಹಾಗೂ ಚಂದ್ರಮ್ಮ ಬಂಧಿತರು. ಶನಿವಾರ ಸಂಜೆ ತಮಿಳುನಾಡಿನಿಂದ ಸುಮಾರು 45 ಸಾವಿರ ಮೌಲ್ಯದ 7 ಕೆಜಿ ಗಾಂಜಾವನ್ನು ಬಸ್ನಲ್ಲಿ ತಂದು ಗ್ರಾಮದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಈ ದಂಧೆ ಹಲವು ವರ್ಷಗಳಿಂದ ನಿರಂತರವಾಗಿ ಸಾಗಿದ್ದು ಕೆಜಿಎಫ್ ಡಿವೈಎಸ್ಪಿ ವಿವೇಕಾನಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಮಾಲು ಸಮೇತ ಬಂಧಿಸಿದ್ದಾರೆ. ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಸಾವು: ಕೊಲೆ ಶಂಕೆ
ಕೋಲಾರ: ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಯುವಕನೊಬ್ಬ ಅಸ್ವಾಭಾವಿಕವಾಗಿ ಮೃತಪಟ್ಟಿದ್ದು, ಮೃತನ ಕುಟುಂಬದವರು ಈ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತಪಡಿಸಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಮದಾಸ (37)ಮೃತ ಯುವಕನಾಗಿದ್ದು, ಚಿಂತಾಮಣಿ ತಾಲೂಕಿನ ನಾರಾಯಣ ಹಳ್ಳಿಯ ಮೂಲದವನಾಗಿದ್ದಾನೆ. ಅಲೆಮಾರಿ ಜನಾಂಗದವರಾಗಿರುವ ಮೃತನು ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಅತಿಯಾಗಿ ಕುಡಿದು ಬಂದ ಈತ ಬಿದ್ದು ಗಾಯಗೊಂಡು ಮೃತಪಟ್ಟನೆಂದು ಮುನಿಯಮ್ಮ ಎಂಬುವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರೆ. ಮೃತನ ಸಂಬಂಧಿಕರು ಇದು ಕೊಲೆಯಾಗಿದ್ದು ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
ಕೆಜಿಎಫ್: ಲಾರಿ ಚಾಲಕನ ಆಯಾತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಲಾರಿಯಲ್ಲಿ ತುಂಬಿದ್ದ ತೆಂಗಿನ ಕಾಯಿ ಹಾಗೂ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದಾಗಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಪ್ಪಂನಿಂದ ರಾಜಪೇಟೆ ರಸ್ತೆ ಮಾರ್ಗವಾಗಿ ವಿ. ಕೋಟಗೆ ತೆಂಗಿನಕಾಯಿಯನ್ನು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿ ಚಾಲಕನ ಆಯಾ ತಪ್ಪಿತು. ಸಂದಘಟ್ಟ ಕ್ರಾಸ್ ಬಳಿ ರಸ್ತೆಯ ಬಲಗಡೆಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿಗಳು ಕತ್ತರಿಸಿ ಲಾರಿ ಮೇಲೆ ಬಿದ್ದಿದ್ದರಿಂದ ಲಾರಿಯಲ್ಲಿದ್ದ ಸುಮಾರು ರು. 2,11,910 ತೆಂಗಿನ ಕಾಯಿಗಳು ಮತ್ತು ರು. 3.50 ಲಕ್ಷ ಮೌಲ್ಯದ ಲಾರಿಯ ಬಿಡಿ ಭಾಗಗಳು ಹಾಗೂ ದಾಖಲಾತಿಗಳು, ಎಟಿಎಂ ಹಾಗೂ ಪಾನ್ ಕಾರ್ಡ್ ಮತ್ತಿತರೆ ವಸ್ತುಗಳು ಸುಟ್ಟು ಹೋಗಿದೆ. ಬೇತಮಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃಷ್ಣಪ್ಪ ವಿರುದ್ಧ ಡಿಸಿಗೆ ದೂರು
ಕೋಲಾರ: ಕೇಳಿದಷ್ಟು ಹಣ ನೀಡಿಲ್ಲವೆಂಬ ಕಾರಣಕ್ಕೆ ಮದ್ಯದಂಗಡಿಗಳ ಹಾಗೂ ಇತರೆ ವ್ಯಾಪಾರಸ್ಥರ ಮೇಲೆ ಪ್ರಜಾ ವಿಮೋಚನಾ ಚಳವಳಿ ಜಿಲ್ಲಾಧ್ಯಕ್ಷ ಎ.ಕೃಷ್ಣಪ್ಪ ದೂರು ನೀಡಿದ್ದಾರೆ ಎಂದು ನಗರದ ಬಂಗಾರಪೇಟೆ ವೃತ್ತದ ಮದ್ಯದಂಗಡಿಗಳ ಮಾಲೀಕರು ಮತ್ತು ಇತರೆ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಿಗೆ ಪ್ರತಿ ದೂರು ಸಲ್ಲಿಸಿದ್ದಾರೆ. ಬಂಗಾರಪೇಟೆ ವೃತ್ತದ ಮದ್ಯದಂಗಡಿಗಳ ಮಾಲೀಕರು ಹಾಗೂ ಇತರೆ ವ್ಯಾಪಾರಿಗಳ ಬಳಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ವಾರ್ಷಿಕೋತ್ಸವ ಹೆಸರಿನಲ್ಲಿ ಹಣ ವಸೂಲಿಗೆ ಪಿವಿಸಿ ಕೃಷ್ಣಪ್ಪ ಬಂದಿದ್ದರು. ನಮ್ಮ ಕೈಲಾದಷ್ಟು ದೇವರ ಕಾರ್ಯಕ್ಕೆ ಹಣ ನೀಡಿದ್ದೇವೆ. ಆದರೆ, ಕೇಳಿದಷ್ಟು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆಂದು. ಸುಮಾರು 20 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿದ್ದೇವೆ. ಕೃಷ್ಣಪ್ಪನವರು ನೀಡಿರುವ ದುರುದ್ದೇಶಪೂರಿತ ದೂರಿಗೆ ಮಾನ್ಯತೆ ನೀಡಬಾರದೆಂದು ಮನವಿ ಮಾಡಿದ್ದಾರೆ. ನಗರಸಭೆ ಸದಸ್ಯರಾದ ಮುನೇಶ್, ಮಂಜುನಾಥ್ ಮತ್ತು ವ್ಯಾಪಾರಸ್ಥರಾದ ವೆಂಕಟಾಚಲಪತಿ, ಗಿರೀಶ್, ಸೋಮಶೇಖರ್, ಹರೀಶ್, ಪ್ರಕಾಶ್, ರಾಜಗೋಪಾಲ್ ಮನವಿ ಇದ್ದರು.