ಬಿ. ರಂಗಸ್ವಾಮಿ
ತಿಪಟೂರು: ಕಲ್ಪತರು ನಾಡಿನ ರೈತರು ಮಳೆ ಇಲ್ಲದೆ ದಿನವೂ ಮೋಡ ಮುಸುಕಿದಂತಿರುವ ಆಕಾಶದೆಡೆಗೆ ದೃಷ್ಟಿ ನೆಟ್ಟು, ಮಳೆರಾಯನ ಕೃಪೆಗಾಗಿ ಹಗಲಿರುಳು ಚಿಂತಿಸುತ್ತ ಕಾಲ ಕಳೆಯುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಇಳಿಕೆಯಾಗುತ್ತಾ ಸಾಗಿದೆ.
ಈ ವರ್ಷ ಏಪ್ರಿಲ್ನಲ್ಲಿ ಪ್ರಾರಂಭವಾದ ಪೂರ್ವಮುಂಗಾರು ಮಳೆ, ರೈತರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿತ್ತು. ನಂತರದ 3 ತಿಂಗಳಿಂದ ಮಳೆ ಮುನಿಸಿಕೊಂಡಿತು. ಮಳೆಯನ್ನೇ ನೆಚ್ಚಿ ಬದುಕುತ್ತಿರುವ ತಾಲೂಕಿನ ರೈತರು ಕಂಗಾಲಾಗುವಂತೆ ಮಾಡಿದೆ. ಪೂರ್ವ ಮುಂಗಾರು ಮಳೆಗೆ ರೈತರು ಸಾಲಸೋಲ ಮಾಡಿಕೊಂಡು ಹೆಸರು, ಉದ್ದು ಮತ್ತು ಎಳ್ಳು ಬೆಳೆಗಳನ್ನು ಬಿತ್ತಿದ್ದರು. ಮಳೆ ಕೈಕೊಟ್ಟ ಪರಿಣಾಮ, ಬೆಳೆಗಳೆಲ್ಲವೂ ಒಣಗಿ ಹೋಗಿವೆ.
ತಡವಾದ ರಾಗಿ ಬಿತ್ತನೆ: ಪೂರ್ವ ಮುಂಗಾರು ಬೆಳೆಗಳಾದ ಹೆಸರು,ಉದ್ದು, ಎಳ್ಳು ಬಿತ್ತಿದ್ದ ರೈತರು, ರಾಗಿ ಬಿತ್ತನೆಗೆ ಭೂಮಿಯನ್ನು ಹದಗೊಳಿಸಿಕೊಂಡು ಜುಲೈ ಮೊದಲ ವಾರದಿಂದಲೇ ರಾಗಿ ಬಿತ್ತನೆ ಆರಂಭಿಸಬೇಕಾಗಿತ್ತು. ಆದರೆ ಮಳೆರಾಯ ಇನ್ನೂ ಕೈಕೊಟ್ಟಿರುವುದರಿಂದ ಭೂಮಿಯನ್ನ ಹಸನುಗೊಳಿಸಿಕೊಳ್ಳಲಾಗದೆ ರೈತರು ಅಸಹಾಯಕರಾಗಿ ಆಕಾಶವನ್ನೇ ದಿಟ್ಟಿಸುವಂತಾಗಿದೆ. ರಾಗಿ ಬಿತ್ತನೆ ಜುಲೈ ಮೊದಲ ವಾರದಲ್ಲೇ ಆರಂಭಗೊಳ್ಳಬೇಕಿದೆ.
ಮಳೆರಾಯ ಕೃಪೆ ತೋರುತ್ತಿಲ್ಲವಾದ್ದರಿಂದ ರೈತರು ತೀವ್ರ ಕಂಗಾಲಾಗಿದ್ದಾರೆ. ತಾಲೂಕಿನ ಕೆಲವೆಡೆ ಕಳೆದ 15-20 ದಿವಸಗಳ ಹಿಂದೆ ಬಿದ್ದಿದ್ದ ಸುಮಾರು ಹದಮಳೆಗೆ ಕೆಲ ರೈತರು ಉಳುಮೆ ಮಾಡಿ ಕಳೆ ತೆಗೆದು ರಾಗಿ ಬಿತ್ತನೆಗೆ ಭೂಮಿಯನ್ನು ಅಚ್ಚುಕಟ್ಟು ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ ವಾರ ಸಣ್ಣ ಸೋನೆ ಬಂದರೂ ಬಹಳಷ್ಟು ಮಂದಿ ರೈತರು ರಾಗಿ, ಅವರೆ, ತೊಗರಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬಿತ್ತನೆ ಮಾಡುವ ದೃಶ್ಯ ಕಾಣಬಹುದಾಗಿದೆ.
ಮೇವಿಗೆ ಬರ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ ನಂತರದ ರೈತರ ಆದಾಯವೆಂದರೆ ಪಶುಸಂಗೋಪನೆ. ಆದರೆ ಪಶುಸಂಗೋಪನೆಗೆ ಪ್ರಮುಖವಾಗಿ ರಾಗಿ ಹುಲ್ಲು ಅತ್ಯಗತ್ಯವಾಗಿದೆ. ಮಳೆ ಇಲ್ಲದ ಪರಿಣಾಮ ಈ ವರ್ಷವೂ ದನಕರುಗಳಿಗೂ ಮೇವಿಲ್ಲದಂತಾಗುವ ಲಕ್ಷಣಗಳೂ ಗೋಚರವಾಗುತ್ತಿವೆ.
ನೀರಿಗೂ ಸಂಚಕಾರ: ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಸಹಜವಾಗಿಯೇ ಅಂತರ್ಜಲದ ಕೊರತೆ ಎದುರಾಗಿದೆ. ಕಳೆದ ವರ್ಷ ಕೆಲ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದಿದ್ದು ಬಿಟ್ಟರೆ, ಅನೇಕ ವರ್ಷಗಳಿಂದ ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿವ ನೀರಿನ ಏಕೈಕ ಆಸರೆ ಎಂದರೆ ಬೋರ್ವೆಲ್ಗಳು ಮಾತ್ರ. ಬೋರ್ವೆಲ್ಗಳಲ್ಲಿ ಸಹ ಅಂತರ್ರ್ಜಲ ಈ ಬಾರಿ ಬತ್ತಿ ಹೋಗುವುದು ನಿಶ್ಚಿತ ಎಂಬುದು ರೈತರಲ್ಲಿ ದುಗುಡ ಹುಟ್ಟಿಸಿದೆ.
ಕಳೆಗುಂದುತ್ತಿರುವ ತೆಂಗು: ಹತ್ತಾರು ವರ್ಷಗಳಿಂದ ನಿರಂತರ ಬರದ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ತೆಂಗು ನಾನಾ ರೋಗಗಳಿಗೆ ತುತ್ತಾಗಿವೆ. ಬೆಳೆಗಾರರು ದಿಕ್ಕೆಡುವಂತೆ ಮಾಡಿದೆ. ಒಂದೆಡೆ ಅರ್ಧಕ್ಕೂ ಹೆಚ್ಚು ತೆಂಗು ಒಣಗಿ ಸುಳಿ ಬಿದ್ದಿದ್ದರೆ, ಇನ್ನೊಂದೆಡೆ ತೆಂಗಿನ ಮರಗಳು ಈ ವರ್ಷವೂ ಮಳೆ ಬಾರದ್ದರಿಂದ ಮತ್ತೆ ಕಳೆಗುಂದಿವೆ. ರೈತರ ಮುಖದಲ್ಲೂ ಭೀಕರ ಬರದ ಛಾಯೆ ಆವರಿಸಿದೆ.