ಕನ್ನಡಪ್ರಭ ವಾರ್ತೆ ತುಮಕೂರು ಜು.7
ಉದ್ದೇಶಿತ ವಿಜ್ಞಾನಗುಡ್ಡ ಸ್ಥಾಪನೆಯಾಗಲಿರುವ 327 ಎಕರೆ ಜಾಗದ ಒತ್ತುವರಿ ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅಭಿವೃದ್ಧಿ ರೆವಲ್ಯೂಷನ್ ಫೋರಂ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.
ತುಮಕೂರು ತಾಲೂಕಿನ ಅಮಲಾಪುರದ ಕೇಂದ್ರೀಯ ವಿದ್ಯಾಲಯ ಅಕ್ಕಪಕ್ಕದ ಸರ್ಕಾರಿ ಜಮೀನಿನಲ್ಲಿ ವಿಜ್ಞಾನಗುಡ್ಡ ಮತ್ತು ದೇಸಿ ಆರ್ಟಿಸಾನ್ ಹಬ್ ವಿಶೇಷ ಪ್ರಸ್ತಾವನೆಗೆ ಸರ್ಕಾರಿ ಜಮೀನು ಗುರುತಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ಮಾಣ ಮತ್ತು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತುಮಕೂರು ಜಿಲ್ಲಾ ಆರ್ಟಿಸಾನ್ ಕ್ಲಸ್ಟರ್ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಯೋಜನೆ ರೂವಾರಿ ಎಂದೇ ಬಿಂಬಿಸಿಕೊಂಡು ಬಂದಿದ್ದ ಮಾಜಿ ಸಂಸದ ಜಿ.ಎಸ್. ಬಸವರಾಜ್ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಇದ್ದುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಈ ಪ್ರತಿಭಟನಾ ಧರಣಿಗೆ ಮಾಜಿ ಸಂಸದರ ಬೆಂಬಲವಿದೆ. ಧರಣಿಯಲ್ಲಿ ಸಂಸದರು ಪಾಲ್ಗೊಳ್ಳುವುದು ಖಚಿತ ಎಂದೇ ಬಿಂಬಿಸಲಾಗಿತ್ತು. ಆದರೆ ಬಸವರಾಜ್ ಪಾಲ್ಗೊಳ್ಳದೇ ಇರುವುದು ಹುಬ್ಬೇರಿಸುವಂತೆ ಮಾಡಿದೆ.
ನಾನು ಯಾರಿಗೂ ಕೇರ್ ಮಾಡಲ್ಲ. ವಿಜ್ಞಾನಗುಡ್ಡ ಒತ್ತುವರಿ ತೆರವು ಹೋರಾಟಕ್ಕೆ ಸದಾ ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಜಿಎಸ್ಬಿ ಘೋಷಿಸಿದ್ದರು. ವಿಜ್ಞಾನಗುಡ್ಡ ಒತ್ತುವರಿ ತೆರವಿನ ಸಂಬಂಧ “OÚ«ÚsÚ®Úúڒ 2013, ಆಗಸ್ಟ್ನಲ್ಲಿ 5 ದಿನಗಳ ಕಾಲ ಸರಣಿ ಲೇಖನ ಪ್ರಕಟಿಸಿತ್ತು. ಅದಾಗಿ 11 ತಿಂಗಳ ನಂತರ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಾಂಕೇತಿಕ ಪ್ರತಿಭಟನೆ ನಡೆದಿದೆ. ಆದರೆ ವಿಜ್ಞಾನಗುಡ್ಡದ ರೂವಾರಿ ಎಂದೇ ಬಿಂಬಿಸಲ್ಪಟ್ಟಿದ್ದ ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರ ಗೈರಿನಲ್ಲಿ ಎಂಬುದು ಗಮನಾರ್ಹ. ಸಂಸದರು ತುಮಕೂರಿನಲ್ಲೇ ಇದ್ದರೂ ಈ ಸಾಂಕೇತಿಕ ಪ್ರತಿಭಟನೆಗೆ ಬಾರದೇ ಇರುವುದು ಗುಮಾನಿಗೆಡೆ ಮಾಡಿಕೊಟ್ಟಿದೆ. ಈ ಪ್ರತಿಭಟನೆಯಲ್ಲಿ ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ನಾರಾಯಣಪ್ಪ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.