ಕೊರಟಗೆರೆ: ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ತಾಲೂಕು ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಕಾಂಗ್ರೆಸ್ನ ಹೈಕಮಾಂಡ್ನ ವರಿಷ್ಟರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಲೂಕು ವೀರಶೈವ ಲಿಂಗಾಯಿತ ಸಮಾಜದ ಮುಖಂಡರ ಪರವಾಗಿ ಪ್ರತಿಕಾ ಗೋಷ್ಠಿಯಲ್ಲಿ ಮುಖಂಡ ಹಾಗೂ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಸ್ವಹಿತ ಮರೆತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ರಿಗೆ ಪಕ್ಷ ಅಧಿಕಾರಕ್ಕೆ ಬಂದು ಎರಡನೇ ವರ್ಷಕ್ಕೆ ಕಾಲಿಟ್ಟರೂ, ವರಿಷ್ಠರು ರಾಜ್ಯ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡದಿರುವುದು ವಿಷಾದನೀಯ.
ಅಡ್ಡಿ ಇಲ್ಲ: ಈ ಬಗ್ಗೆ ಅನೇಕ ದಲಿತ ಸಮಾಜ ಸೇರಿದಂತೆ ಅನೇಕ ಸಮುದಾಯದ ಮುಖಂಡರು ಹಾಗೂ ವೀರಶೈವ ಸಮಾಜದ ಮುಖಂಡರಾದ ರಾಜಶೇಖರನ್ ಅವರು ಕೆಪಿಸಿಸಿ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಈಗಾಗಲೇ ಪಕ್ಷದಿಂದ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಉಪ ಮುಖ್ಯಮಂತ್ರಿ ಆಗಲು ಯಾವುದೇ ಅಡೆತಡೆಗಳಿರುವುದಿಲ್ಲ. ಡಾ.ಜಿ. ಪರಮೇಶ್ವರ್ ಅವರಿಗೆ ಇಲ್ಲಿಯವರೆಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡದೆ ಇರುವುದು ಕಾರ್ಯಕರ್ತರಿಗೆ, ದಲಿತರಿಗೆ, ನಮಗೂ ಬೇಸರ ತಂದಿದೆ. ಕೂಡಲೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಹಾಲು ಒಕ್ಕೂಟದ ನಿರ್ದೇಶಕ ಎಂ.ಪಿ. ಸೋಮಣ್ಣ ಮಾತನಾಡಿದರು. ಸಭೆಯಲ್ಲಿ ಕೊರಟಗೆರೆ ತಾಲೂಕು ವೀರಶೈವ ಲಿಂಗಾಯಿತ ಸಮಾಜದ ಪರ್ವತಯ್ಯ, ಹಿರಿಯ ಮುಖಂಡರಾದ ವಿಶ್ವೇಶ್ವರಯ್ಯ, ಚಂದ್ರಣ್ಣ, ಎಲೆರಾಂಪುರ ಶಿವಣ್ಣ, ಶಂಕರಾಧ್ಯ, ಮಂಜುನಾಥ್, ಎಸ್.ಆರ್. ಚಂದ್ರಣ್ಣ, ಉಮಾಶಂಕರ್, ಭದ್ರಣ್ಣ, ಮಂಜುಳರಂಗ ಸ್ವಾಮಿ, ಮಂಜುಳಾ, ಜಯಮ್ಮ, ಕರಿಬಸವಯ್ಯ, ಚಂದ್ರಶೇಖರಯ್ಯ ಇತರರಿದ್ದರು.