ತುಮಕೂರು: ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸುವ ಸಂಕಲ್ಪ ಹೊಂದಿರುವುದಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ಭರವಸೆ ನೀಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು ಗ್ರಾಮದಲ್ಲಿ ನಡೆದ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯು ಸಕ್ರಿಯವಾಗಿ ಶಾಲಾ ಕಾರ್ಯಕ್ರಮಗಳ ಬಗ್ಗೆ ಮುತುವರ್ಜಿ ವಹಿಸಿದಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲು ಸಾಧ್ಯ ಎಂದು ತಿಳಿಸಿದರು.
ಕರ್ತವ್ಯ ನಿರ್ವಹಣೆ: ಸರ್ಕಾರಿ ಶಾಲೆಗಳ ಬಗ್ಗೆ ಸಾಮಾನ್ಯ ಜನರ ಮನಸ್ಸಿನಲ್ಲಿರುವ ಕೆಟ್ಟ ಭಾವನೆಯನ್ನು ತೊಲಗಿಸುವಂತೆ ಆಗಬೇಕು ಇದು ಕಾರ್ಯರೂಪಕ್ಕೆ ಬರಬೇಕೆಂದರೆ ನಮ್ಮ ನಮ್ಮ ಗ್ರಾಮಗಳಲ್ಲಿರುವ ಶಾಲೆಗಳ ಬಗ್ಗೆ ಗ್ರಾಮಸ್ಥರು ಪೋಷಕರು ಮತ್ತು ಸಮಿತಿಯ ಸದಸ್ಯರು ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಿದಾಗ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ಸಾಧ್ಯ ಎಂದರು. ಮುಖ್ಯಶಿಕ್ಷಕರು ರಜೆ ಪಡೆಯಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಅನುಮತಿ ಕಡ್ಡಾಯವಾಗಿ ಪಡೆಯಬೇಕು.
ಇದನ್ನು ಎಲ್ಲ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಶಾಲಾಭಿವೃದ್ಧಿ ಸಮಿತಿಯ ಕಾಯ್ದೆ ಪುಸ್ತಕವನ್ನು ಓದಬೇಕು ಮತ್ತು ಅದನ್ನು ಕಡ್ಡಾಯವಾಗಿ ಪಾಲನೆ ಆಗಬೇಕು ಎಂದು ಅರಿವು ಮೂಡಿಸಿದರು.
ಲೆಕ್ಕ ಪುಸ್ತಕಗಳ ತಪಾಸಣೆ: ಶಾಲೆಗಳ ಅಭಿವೃದ್ಧಿಗೆ ಲಕ್ಷಾಂತರ ರುಪಾಯಿ ಅನುದಾನ ಬಿಡುಗಡೆ ಆಗುತ್ತಿದ್ದು, ಇದರ ಸಮರ್ಪಕವಾಗಿ ಬಳಕೆ ಅಗಬೇಕು ಎಂದರು. ಹೆಬ್ಬೂರು ಸರ್ಕಾರಿ ಪ್ರೌಢಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸಲು ಸಂಕಲ್ಪ ಮಾಡಲಾಗಿದೆ.
ಈಗಾಗಲೆ ನಾಗವಲ್ಲಿ, ಹೊನ್ನುಡುಕೆ ಹ್ಯಾಂಡ್ ಪೋಸ್ಟ್, ಹೆತ್ತೇನಹಳ್ಳಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದು, ಪ್ರಸಕ್ತ ಸಾಲಿನಲ್ಲಿ ಹೋಬಳಿ ಕೇಂದ್ರ ಹೆಬ್ಬೂರು ಗ್ರಾಮದಲ್ಲಿ ಈಗಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎಪಿಎಂಸಿ ಮಾರುಕಟ್ಟೆ, ಕೆಇಬಿ ಸ್ಟೇಷನ್ ಎಲ್ಲ ಮೂಲಭೂತಸೌಲಭ್ಯಗಳಿಂದ ಕೂಡಿರುವ ಸುಸಜ್ಜಿತ ಗ್ರಾಮವಾದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಕಂಪ್ಯೂಟರ್ ಸದ್ಬಳಕೆ: ಶಾಲಾ ಕಾಂಪೌಂಡ್ ಮತ್ತು ಸುಸಜ್ಜಿತ ಗೇಟ್ ಮತ್ತು ಗ್ರಂಥಾಲಯ ಹಾಗೂ ಈಗಾಗಲೇ ನೀಡಿರುವ ಕಂಪ್ಯೂಟರ್ಗಳ ಸದ್ಬಳಕೆಗಳ ಬಗ್ಗೆ ಪ್ರತಿ ತಿಂಗಳು ಸಭೆ ಸೇರಿ ಚರ್ಚಿಸಿ ಅಭಿವೃದ್ಧಿಪಡಿಸುವುದಾಗಿ ಶಾಸಕರು ಭರವಸೆ ನೀಡಿದರು.