ತುಮಕೂರು ಸ್ಮಾರ್ಟ್ ಸಿಟಿ!

Updated on: 

ಉಗಮ ಶ್ರೀನಿವಾಸ್
ತುಮಕೂರು: ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಸ್ಮಾರ್ಟ್ ಸಿಟಿಯಾಗುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಬಜೆಟ್ನಲ್ಲಿ ಕೈಗಾರಿಕಾ ಕಾರಿಡಾರ್ನ್ನು ತುಮಕೂರಿನವರೆಗೂ ವಿಸ್ತರಿಸಿರುವುದರಿಂದ ಅಕ್ಷರಶಃ ತುಮಕೂರು ಸ್ಮಾರ್ಟ್ ಸಿಟಿಯಾಗಲಿದೆ.
ಈಗಾಗಲೇ ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ವಲಯವಾಗಿ ಬೆಳೆಯುತ್ತಿದೆ. ಜಪಾನ್ ಸೇರಿದಂತೆ ಹೊರ ದೇಶಗಳ ಕೈಗಾರಿಕೆಗಳು ತುಮಕೂರಿಗೆ ಲಗ್ಗೆ ಇಟ್ಟಿವೆ. ಮೂರು ರಾಷ್ಟ್ರೀಯ ಹೆದ್ದಾರಿಗಳು ತುಮಕೂರನ್ನು ಹಾದು ಹೋಗಿವೆ. ಎಲ್ಲಕ್ಕೂ ಮಿಗಿಲಾಗಿ ರೈಲ್ವೆ ಡಬಲ್ ಟ್ರ್ಯಾಕ್ ಇರುವುದು ಕೂಡ ತುಮಕೂರಿಗೆ ವರದಾನವಾಗಿದೆ. ಅಲ್ಲದೇ ಬೆಂಗಳೂರಿಗೆ ಕೂಗಳತೆ ದೂರದಲ್ಲಿದೆ. ಜೊತೆಗೆ ರಾಜ್ಯದ 18 ಜಿಲ್ಲೆಗಳನ್ನು ರಾಜಧಾನಿಗೆ ಸಂಪರ್ಕಿಸುವ ಹೆಬ್ಬಾಗಿಲು ಎಂಬ ಖ್ಯಾತಿಗೆ ತುಮಕೂರು ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಮಾರು ಮೂರು ದಶಕಗಳ ಕೆಳಗೆ ತುಮಕೂರಿಗೆ ಎಚ್ಎಂಟಿ ಕಾರ್ಖಾನೆ ಬಂದಾಗಲೇ ಅಭಿವೃದ್ಧಿಗೆ ನಾಂದಿಯಾಯಿತು. ಕಳೆದೊಂದು ದಶಕದಿಂದ ತುಮಕೂರು ಅಭಿವೃದ್ಧಿ ವಿಷಯದಲ್ಲಿ ವೇಗ ಪಡೆದುಕೊಂಡಿತು. ಈಗ ತುಮಕೂರು ಮಹಾನಗರ ಪಾಲಿಕೆಯೂ ಆಗಿದೆ. ಹೊಸ ಹೊಸ ಬಡಾವಣೆಗಳು ತಲೆ ಎತ್ತಿವೆ. ಮೇಲ್ಸೇತುವೆಗಳ ನಿರ್ಮಾಣವಾಗಿದೆ. ಸಿಟಿ ಬಸ್ ಸಂಚಾರ ಆರಂಭವಾಗಿದೆ. ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದೆ. ಈಗ ಕೈಗಾರಿಕಾ ಕಾರಿಡಾರ್ನ್ನು ತುಮಕೂರಿನವರೆಗೂ ವಿಸ್ತರಿಸಿರುವುದರಿಂದ ಭವಿಷ್ಯದಲ್ಲಿ ತುಮಕೂರು ಮತ್ತಷ್ಟು ಬಲಿಷ್ಠವಾಗಲಿದೆ.
ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ನೀರಾವರಿ, ರೈಲು ಸಂಪರ್ಕ ಹೊಂದಿರುವುದರ ಜತೆಗೆ ದೇವನಹಳ್ಳಿ ವಿಮಾನ ನಿಲ್ದಾಣ ತುಮಕೂರು ಜಿಲ್ಲೆಗೆ ಸನಿಹದಲ್ಲೇ ಇದೆ. ಅಲ್ಲದೇ ಬೆಂಗಳೂರಿನ ಭಾರವನ್ನು ತಗ್ಗಿಸಲು ತುಮಕೂರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗ ಕೈಗಾರಿಕಾ ಕಾರಿಡಾರ್ ಆಗುವುದರಿಂದ ಮತ್ತಷ್ಟು ಆರ್ಥಿಕವಾಗಿ ತುಮಕೂರು ಬೆಳೆಯಲಿದೆ. ಕಳೆದ ಒಂದು ದಶಕದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ತುಮಕೂರಿಗೆ ಪ್ರತಿದಿನ 58ಕ್ಕೂ ಹೆಚ್ಚು ರೈಲುಗಳು ಓಡಾಟ ಮಾಡುತ್ತಿವೆ. ಜೈಪುರ, ನವದೆಹಲಿ, ಮುಂಬೈ, ಗೋವಾ ಮುಂತಾದ ರಾಜ್ಯಗಳಿಗೆ ತುಮಕೂರಿನ ಮೂಲಕವೇ ರೈಲು ಸಂಚಾರ ಮಾಡುತ್ತಿದೆ. ರೈಲು, ನೀರು, ಸಾರಿಗೆ, ವಿಮಾನ ನಿಲ್ದಾಣ, ಚತುಷ್ಪಥ ರಸ್ತೆಗಳನ್ನು ಒಳಗೊಂಡಿರುವ ಈಗಾಗಲೇ ವಸಂತನರಸಾಪುರ ಕೈಗಾರಿಕಾ ವಲಯವಾಗಿ ಬೆಳೆಯುತ್ತಿರುವ ಬೆನ್ನಲ್ಲೇ ಕೈಗಾರಿಕಾ ಕಾರಿಡಾರ್ ಬರುತ್ತಿರುವುದು ತುಮಕೂರಿಗೆ ವರದಾನವಾಗಿದೆ. ರೈಲ್ವೆ ಬಜೆಟ್ನಲ್ಲೂ ಕೂಡ ಹೊಸ ರೈಲುಗಳನ್ನು ತುಮಕೂರಿಗೆ ನೀಡಲಾಗಿತ್ತು. ಅಲ್ಲದೇ ಮಂಗಳೂರಿಗೆ ರಾತ್ರಿ ವೇಳೆ ತುಮಕೂರಿನ ಮೂಲಕ ರೈಲನ್ನು ಓಡಿಸಲು ಬಜೆಟ್ನಲ್ಲಿ ವಿಷಯ ಪ್ರಸ್ತಾಪ ಮಾಡಲಾಗಿತ್ತು. ಆದರೆ ಈಗ ಕೈಗಾರಿಕಾ ಕಾರಿಡಾರ್ ಅನ್ನು ಕೇಂದ್ರ ಸರ್ಕಾರ ಆದ್ಯತೆ ಮೇರೆ ನೀಡಿರುವುದರಿಂದ ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಶೀಘ್ರ ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮಲಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com