ತುಮಕೂರು: ವಿಜ್ಞಾನಗುಡ್ಡದ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನೀಡಿದ್ದರೂ ತೆರವು ಮಾಡಲು ಮೀನಮೇಷ ಎಣಿಸುತ್ತಿರುವ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳ ವಿರುದ್ಧ ಮಾಜಿ ಸಂಸದ ಜಿ.ಎಸ್. ಬಸವರಾಜ್ ಹರಿಹಾಯ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜ್ಞಾನಗುಡ್ಡದ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಇದುವರೆಗೂ ಒತ್ತುವರಿ ತೆರವು ಮಾಡಿಲ್ಲ. ಸರಕಾರಿ ಭೂಮಿ ಒತ್ತುವರಿಯಾಗಿದ್ದರೂ ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತಿರುವ ಇಂಥ ಅಧಿಕಾರಿಗಳು ಉನ್ನತ ಹುದ್ದೆಗಳಲ್ಲಿ ಇರಕೂಡದು. ಒಂದು ವೇಳೆ ಇದೇ ರೀತಿಯ ನಿರ್ಲಕ್ಷ ಮುಂದುವರೆದರೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒತ್ತುವರಿದಾರರು ಯಾವುದೇ ಜಾತಿಗೆ ಸೇರಿದ್ದರೂ ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿದವನಲ್ಲ. ವೀರಶೈವರಾಗಲಿ, ಇತರೆ ಕೋಮಿನವರಾಗಲಿ ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಜಿಲ್ಲಾಡಳಿತ ಅವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ಉಪನ್ಯಾಸಕ ಹಾಲೇನೂರು ಲೇಪಾಕ್ಷ, ನಿವೃತ್ತ ಅಧಿಕಾರಿ ರಘೋತ್ತಮ್ ರಾವ್, ಕೊಪ್ಪಲ್ ನಾಗರಾಜ್, ರಂಗಾನಾಯಕ್, ಎಂಜಿನಿಯರ್ ಪ್ರೇಮಕುಮಾರ್ ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯಗೆ ಕಳಂಕ
ಸರಕಾರ ಸ್ವಭಾವಿಕವಾಗಿ ಗುರತ್ವಾಕರ್ಷಣೆ ಮೂಲಕ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೊಸನಗರದಿಂದ ಕೋಲಾರದವರೆಗೆ ಎತ್ತಿನಹೊಳೆ ಯೋಜನೆಯನ್ನು ಬಿಟ್ಟು ಪೈಪ್ಲೈನ್ ಲಾಬಿಗೆ ಮಣಿದು ಯೋಜನೆ ಪ್ರಾರಂಭಿಸಿದರೆ ಅದರ ಕಳಂಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುತ್ತಿಕೊಳ್ಳಲಿದೆ. ಇದುವರೆಗೂ ಸಾರ್ವಜನಿಕವಾಗಿ ಪ್ರಾಮಾಣಿಕರೆಂದು ಹೆಸರು ಮಾಡಿರುವ ಸಿದ್ದರಾಮಯ್ಯ ಐಎಎಸ್ ಮತ್ತು ಪೈಪ್ಲೈನ್ ಲಾಬಿಗೆ ಮಣಿದು ಯೋಜನೆಯನ್ನು ಸಾಯಿಸಬಾರದು. ಒಂದು ವೇಳೆ ಪೈಪ್ಲೈನ್ ಮೂಲಕವೇ ನೀರು ತೆಗೆದುಕೊಂಡು ಹೋಗಲು ಮುಂದಾದರೆ ನ್ಯಾಯಾಲಯದ ಮೆಟ್ಟಿಲು ಹತ್ತುವುದರ ಜೊತೆಗೆ ಕೇಂದ್ರ ಸರಕಾರಕ್ಕೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗುವುದು ಎಂದರು.
ಜಿಲ್ಲೆಗೆ ಬಂಪರ್ ಕೊಡುಗೆ
ಕೇಂದ್ರ ಸರಕಾರದ ಬಜೆಟ್ನಲ್ಲಿ ರಾಜ್ಯಕ್ಕೆ ಅದರಲ್ಲಿಯೂ ತುಮಕೂರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದೆ. ಕೈಗಾರಿಕಾ ಕಾರಿಡಾರ್ ಜೊತೆಗೆ ಅದಕ್ಕೆ ಪೂರಕವಾದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವುದಲ್ಲದೆ, ಭವಿಷ್ಯದಲ್ಲಿ ತುಮಕೂರು ಗೇಟರ್ ನೋಯಿಡಾ ರೀತಿ ದೊಡ್ಡ ಕೈಗಾರಿಕಾ ನಗರವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರದ್ದು ನಾಟಕ
ತುಮಕೂರು ನಗರದ ಕಸವನ್ನು ಅಜ್ಜಗೊಂಡನಹಳ್ಳಿ ಬಳಿ ಹಾಕುವುದು ಸೂಕ್ತ. ಏಕೆಂದರೆ ಸುತ್ತ ನಾಲ್ಕು ಕಿ.ಮೀ. ಯಾವುದೇ ಜನವಸತಿ ಪ್ರದೇಶಗಳಿಲ್ಲ. ಆದರೆ, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ನಾಟಕವಾಡುತಿದ್ದ ಕಾಂಗ್ರೆಸ್ಲ್ಲೇ ಎರಡು ತಂಡಗಳು ಈ ವಿಚಾರವನ್ನು ಮುಂದಿಟ್ಟುಕೊಂಡು ಹೈಡ್ರಾಮಾ ಸೃಷ್ಟಿಸುವೆ. ಈಗ ಪ್ರತಿಭಟನೆಗೆ ಇಳಿದವರಲ್ಲಿ ಯಾರು ರೈತರಿಲ್ಲ. ಎಲ್ಲರೂ ರಿಯಲ್ ಎಸ್ಟೇಟ್ ಲಾಬಿಗೆ ಒಳಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎತ್ತಿನಹೊಳೆಗೆ ಜಲಸಾರಿಗೆ
ಕೇಂದ್ರ ಸರಕಾರ ಈ ಸಾಲಿನ ಬಜೆಟ್ನಲ್ಲಿ ಒಳನಾಡು ಜಲಸಾರಿಗೆ ಒತ್ತು ನೀಡುವುದಾಗಿ ತಿಳಿಸಿದ್ದು,ಎತ್ತಿನ ಹೊಳೆ ಯೋಜನೆಯಲ್ಲಿ ಈ ಜಲಸಾರಿಗೆ ಸಾಧ್ಯವಾಗಿಸಬಹುದಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ಅಭಿಪ್ರಾಯಪಟ್ಟರು. 300 ರಿಂದ 500 ಟನ್ ತೂಕದವರೆಗೆ ಈ ಒಳನಾಡು ಜಲಸಾರಿಗೆ ಮೂಲಕ ಸಾಗಿಸಬಹುದಾಗಿದೆ. ಈಗಾಗಲೇ ಶರಾವತಿ ಹಿನ್ನೀರನ್ನು ದಾಟಲು ಉಪಯೋಗಿಸುತ್ತಿರುವಂತಹ ಆಧುನಿಕ ಬೋಟ್ಗಳನ್ನು ಇಲ್ಲಿ ಬಳಕೆ ಮಾಡಲು ಅವಕಾಶವಿದೆ. ಈ ಬಗ್ಗೆ ಕೇಂದ್ರ ಸರಕಾರ ಗಮನ ನೀಡಬೇಕು. ಈ ಬಗ್ಗೆ ಪ್ರಧಾನ ಮಂತ್ರಿಗಳ ಗಮನಸೆಳೆಯಲು ಡಾ. ಸಿದ್ಧಗಂಗಾ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.