ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತ ಮಹಿಳೆ ಯಶೋದಮ್ಮ ತೆಂಗಿನ ತೋಟದಲ್ಲಿ ಕೆಂಪುಮೂತಿ ಹುಳು ಹಾಗೂ ರಸ ಸೋರುವ ರೋಗ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ.ಕೆ.ಆರ್. ಶ್ರೀನಿವಾಸ್, ತೆಂಗಿನಲ್ಲಿ ರೋಗ ಮತ್ತು ಕೀಟ ನಿರ್ವಹಣೆಯನ್ನು ವಿವರಿಸಿ, ತೆಂಗಿನಲ್ಲಿ ಕೆಂಪುಮೂತಿ ಹುಳು ಹಾನಿ ತಡೆಯಲು ಮೋಹಕ ಬಲೆಯನ್ನು ಬಳಸಬೇಕು. ಕೀಟ ಹಾಗೂ ರೋಗದ ಸಮಗ್ರ ನಿರ್ವಹಣೆಗೆ ಪ್ರತಿ ಲೀಟರ್ ನೀರಿಗೆ 5 ಮಿ.ಲೀ ಡೈಕ್ಲೋರೋವಾಸ್ ಕೀಟನಾಶಕ ಮತ್ತು 15ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ, ದ್ರಾವಣ ಹಾನಿಯಾದ ಭಾಗಕ್ಕೆ ಹಾಕುವುದು ಹಾಗೂ ಮೂತಿ ಹುಳು ಕೊರೆದ ಭಾಗಕ್ಕೆ ಅರ್ಕ ಸಂಜೀವಿನಿ (ಹೀಲರ್ ಕೆಮ್ಸೀಲರ್ ಮಿಶ್ರಣದಿಂದ ಪೇಸ್ಟ್) ಕೊರೆದಿರುವ ಸುಳಿ ಭಾಗಕ್ಕೆ ಮುಚ್ಚುವುದು. ನಂತರ ಬಾಧೆಗೊಳಗಾದ ಭಾಗಕ್ಕೆ ಬ್ರಷ್ನಿಂದ ಲೇಪಿಸುವುದರಿಂದ ತೆಂಗಿನಲ್ಲಿ ಕೆಂಪುಮೂತಿ ಹುಳು ಹಾಗೂ ರಸ ಸೋರುವ ರೋಗ ಯಶಸ್ವಿಯಾಗಿ ನಿರ್ವಹಿಸಬಹುದು ಎಂದು ತೋರಿಸಿದರು. ಕೇಂದ್ರದ ವಿಜ್ಞಾನಿಗಳಾದ ಡಾ. ಶಂಕರ್ ಮತ್ತು ಡಾ. ರೂಪ ಬಿ. ಪಾಟೀಲ್ ಉಪಸ್ಥಿತರಿದ್ದರು.