ತುಮಕೂರು: ನಗರದ ಎಸ್.ಎಸ್.ಐ.ಟಿ. ಕ್ಯಾಂಪಸ್ನ ಎಂಬಿಎ ಸೆಮಿನಾರ್ ಹಾಲ್ನಲ್ಲಿ ಜು. 14ರಂದು ಬೆಳಿಗ್ಗೆ 9 ಗಂಟೆಗೆ ಟ್ಯಾಲೆಂಟ್ಸ್ ಆಫ್ ತುಮಕೂರು ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಸಕ ಡಾ. ರಫೀಕ್ ಅಹಮದ್, ಎಸ್.ಎಸ್.ಎ.ಎಚ್.ಇ. ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ ಜಿ. ಪರಮೇಶ್ವರ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಎಸ್ಎಸ್ಐಟಿ ನಿರ್ದೇಶಕ ಎಲ್. ಸಂಜೀವ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಒತ್ತುವರಿ ಜಾಗ ತೆರವಿಗೆ ದಲಿತ ಸಂಘಟನೆಗಳ ಆಗ್ರಹ
ಕುಣಿಗಲ್: ಪುರಸಭೆ ಮುಖ್ಯಾಧಿಕಾರಿಗಳು, ಕೆಲ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಅಂಬೇಡ್ಕರ್ ಭವನದ ಜಾಗ ಒತ್ತುವರಿಯಾಗಿಲ್ಲ ಎಂದು ನೀಡಿರುವ ಆದೇಶವನ್ನು ದಲಿತಪರ ಸಂಘಟನೆ ಮುಖಂಡರು ಖಂಡಿಸಿ ಭವನದ ಜಾಗ ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ಸಂಚಾಲಕ ವಿ. ಶಿವಶಂಕರ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ಭವನ ಜಾಗವನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು ತೆರವುಗೊಳಿಸಲು ದಲಿತ ಸಂಘಟನೆಗಳು ಧರಣಿ ನಡೆಸಿದ್ದರು. ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಭವನದ ಜಾಗ ಒತ್ತುವರಿಯಾಗಿದಿಲ್ಲ ಎಂದು ಸುಳ್ಳು ಆದೇಶ ಮಾಡಿದ್ದಾರೆ. ಮುಖ್ಯಾಧಿಕಾರಿ ಆದೇಶವನ್ನು ಜಿಲ್ಲಾಧಿಕಾರಿ ಮರು ಪರಿಶೀಲನೆ ಮಾಡಿ, ಸದರಿ ಸ್ಥಳದಲ್ಲಿ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.
ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಲಿ
ಮಧುಗಿರಿ: ರೈತರ ಅಹವಾಲುಗಳಿಗೆ ಸ್ಪಂದಿಸಿ ಕೆಲಸ ಮಾಡುವ ವಾತಾವರಣ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎನ್. ರಾಜಣ್ಣ ತಾಕೀತು ಮಾಡಿದರು. ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಕಚೇರಿ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕಚೇರಿಯಲ್ಲಿ ಖಾಲಿ ಇರುವ ಹುದ್ದೆ ತುಂಬಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದು, ಅಕ್ರಮ-ಸಕ್ರಮ ಯೋಜನೆಯಡಿ ನಾಗರಿಕರಿಂದ ಅತ್ಯಧಿಕ ಅರ್ಜಿ ಬಂದಿದ್ದು ಶೀಘ್ರ ವಿಲೇವಾರಿ ಮಾಡಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿ ಸತ್ಯಮೂರ್ತಿ ಮಾತನಾಡಿದರು. ಉಪವಿಭಾಗಾಧಿಕಾರಿ ಅನೀತಾಲಕ್ಷ್ಮೀ, ತಹಸೀಲ್ದಾರ್ ಕೆ. ರಮೇಶ್, ಶಿರಸ್ತೇದಾರ್ ವರದರಾಜು,ಪುರಸಭಾ ಅಧ್ಯಕ್ಷೆ ಎನ್. ಗಂಗಣ್ಣ, ಕಂದಾಯ ನಿರೀಕ್ಷಕ ಶಿವರಾಂ, ಜಯರಾಮ್ ಇದ್ದರು.
ಜನಸಂಪರ್ಕ ಸಭೆ 21ರಿಂದ
ತುಮಕೂರು: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜುಲೈ 21ರಿಂದ 24 ರವರೆಗೆ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಲಿದ್ದಾರೆ ಎಂದು ಲೋಕಾಯುಕ್ತ ಪೋಲಿಸ್ ಅಧೀಕ್ಷಕರು ತಿಳಿಸಿದ್ದಾರೆ. ಈ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ದೂರು ಕುರಿತು ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ. ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ದೂರು ಸಲ್ಲಿಸಬಹುದಾಗಿದೆ. ಜನಸಂಪರ್ಕ ಸಭೆ ಜುಲೈ 21ರಂದು ಕೊರಟಗೆರೆ ಹಾಗೂ ಮಧುಗಿರಿ, 22 ರಂದು ಪಾವಗಡ, 23 ರಂದು ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು ಹಾಗೂ ಗುಬ್ಬಿ, 24 ರಂದು ಕುಣಿಗಲ್ ಹಾಗೂ ಶಿರಾ ತಾಲೂಕಿನಲ್ಲಿ ನಡೆಯಲಿದೆ. ಸಭೆಯು ತಿಪಟೂರಿನ ಪ್ರವಾಸಿ ಮಂದಿರ ಹಾಗೂ ಕುಣಿಗಲ್ನ ಕಂದಾಯ ಭವನದಲ್ಲಿ ನಡೆಯಲಿದ್ದು, ಉಳಿದ ತಾಲೂಕುಗಳಲ್ಲಿ ಆಯಾ ತಾಲೂಕಿನ ತಾಲೂಕು ಪಂಚಾಯತಿ ಸಮುದಾಯ ಭವನದಲ್ಲಿ ನಡೆಯಲಿದೆ. ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲೂಕುಗಳಲ್ಲಿ ಪೋಲಿಸ್ ಉಪಾಧೀಕ್ಷಕ ಶ್ರೀನಿವಾಸ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಕುಣಿಗಲ್ ನಲ್ಲಿ ಪೊಲೀಸ್ ನಿರೀಕ್ಷಕ ಎಂ.ಆರ್. ಗೌತಮ್, ತಿಪಟೂರು, ಗುಬ್ಬಿ ಹಾಗೂ ಶಿರಾ ತಾಲೂಕಿನಲ್ಲಿ ಎಂ.ಪಿ. ಗಂಗಲಿಂಗಯ್ಯ ಸಭೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.