ತುಮಕೂರು: ಓವರ್ ಲೋಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದ ಆರ್ಟಿಒ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಓವರ್ ಲೋಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಇನ್ನು ಮುಂದೆ ಇಲಾಖೆಯಿಂದ ಜಾರಿಗೊಳಿಸಲು ಸ್ವಾಗತಾರ್ಹ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘ ತಿಳಿಸಿದೆ.
ಆದರೆ ತುಮಕೂರಿನ ಗೂಡ್ಸ್ ಶೆಡ್ ಕಾಲೋನಿಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ಓವರ್ ಲೋಡ್ ಸರಕು ಸಾಗಣೆ ಮಾಡುತ್ತಿವೆ. ನಮ್ಮ ಗಮನಕ್ಕೆ ಬಂದಿರುವಂತೆ ಇಲ್ಲಿನ ಸರಕು ಸಾಗಣೆ ವಾಹನಗಳಿಗೆ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಸರಕನ್ನು ಲೋಡ್ ಮಾಡುತ್ತಿರುವುದು ವಾಸ್ತವ ಸಂಗತಿಯಾಗಿದೆ. ಇದರ ಜತೆಗೆ ಇಲ್ಲಿನ ಸರಕು ಸಾಗಣೆ ವಾಹನಗಳ ಎಲ್ಲ ದಾಖಲಾತಿಗಳು ಸಮರ್ಪಕವಾಗಿದೆಯಾ ಎಂಬ ಮೂಲ ಪ್ರಶ್ನೆಯೂ ಇದೆ ಎಂದು ಸಂಘ ತಿಳಿಸಿದೆ.
ಓವರ್ ಲೋಡ್ ದಂಧೆ ಸಂಪೂರ್ಣವಾಗಿ ನಿಲ್ಲಿಸಲು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘ ಸಹಕರಿಸಲು ಸಿದ್ಧವಿದೆ ಎಂದು ತಿಳಿಸಿರುವ ಸಂಘ, ಆರ್ಟಿಒ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿ, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.