ಜಿಪಂಗೆ ಹುಚ್ಚಯ್ಯ ದಳಪತಿ

Updated on: 

ತುಮಕೂರು: ಜಿಪಂ ಕೊನೆಯ ಅವಧಿಗೆ ಅಧ್ಯಕ್ಷರಾಗಿ ವೈ.ಹೆಚ್. ಹುಚ್ಚಯ್ಯ, ಉಪಾಧ್ಯಕ್ಷರಾಗಿ ಆರ್.ಸಿ. ಅಂಜನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯ್ತಿಯ ಮೂರನೇ ಅವಧಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಜಾತಿಗೆ ಮೀಸಲಾಗಿತ್ತು. ಜಿಪಂನ 57 ಸದಸ್ಯರಲ್ಲಿ ಜೆಡಿಎಸ್ 32, ಬಿಜೆಪಿ 13,  ಕಾಂಗ್ರೆಸ್ 11 ಸ್ಥಾನ ಹಾಗೂ ಜೆಡಿಯು ಒಂದು ಸ್ಥಾನವನ್ನು ಹೊಂದಿದ್ದು, ಶಿರಾ ತಾಲೂಕು ತಾವರೆಕೆರೆ ಕ್ಷೇತ್ರದ ಬಡೀರಣ್ಣ ಸಾವಿನಿಂದ ಒಂದು ಸ್ಥಾನ ತೆರವಾಗಿ ಜೆಡಿಎಸ್ 31 ಸ್ಥಾನವನ್ನು ಹೊಂದುವ ಮೂಲಕ ನಿಶ್ಚಿತ ಬಹುಮತ ಹೊಂದಿದೆ.
ಶುಕ್ರವಾ ಬೆಳಗ್ಗೆ 10.30ಕ್ಕೆ ಆರಂಭಗೊಂಡ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಮಧ್ಯಾಹ್ನ 12 ಗಂಟೆ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಬೆಂಗಳೂರು ವಿಭಾಗೀಯ ಕಾರ್ಯದರ್ಶಿ ಗೌರವ ಗುಪ್ತ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕುಣಿಗಲ್ ತಾಲೂಕು ಹುತ್ರಿದುರ್ಗ ಕ್ಷೇತ್ರದ ಜೆಡಿಎಸ್‌ನ ಸದಸ್ಯ ವೈ.ಹೆಚ್. ಹುಚ್ಚಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಪಾವಗಡ ತಾಲೂಕು ವೆಂಕಟಾಪುರ ಕ್ಷೇತ್ರದ ಜೆಡಿಎಸ್ ಸದಸ್ಯ ಆರ್.ಸಿ. ಅಂಜನಪ್ಪ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಅಧ್ಯಕ್ಷ ಸ್ಥಾನ ಮುಂದಿನ 18 ತಿಂಗಳ ಕಾಲವಿದ್ದು ವೈ.ಹೆಚ್. ಹುಚ್ಚಯ್ಯ ಅಧ್ಯಕ್ಷರಾಗಿ ಮುಂದುವರೆದರೆ, ಉಪಾಧ್ಯಕ್ಷರಾಗಿರುವ ಆರ್.ಸಿ. ಅಂಜನಪ್ಪ ಮುಂದಿನ 9 ತಿಂಗಳ ಕಾಲ ಅಧ್ಯಕ್ಷರಾಗಿ ಮುಂದುವರೆಸಲಿದ್ದಾರೆ. ನಂತರ ಮತ್ತೊಬ್ಬ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಕೃಷ್ಣಮೂರ್ತಿ ಅವರಿಗೆ ಬಿಟ್ಟು ಕೊಡಲಿದ್ದಾರೆ ಎಂಬ ಮಾಹಿತಿ ಪಕ್ಷದ ವತಿಯಿಂದ ಕೇಳಿ ಬಂದಿದೆ. ಸಭೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ 48 ಜನ ಸದಸ್ಯರು ಭಾಗವಹಿಸಿದ್ದರು. ಚುನಾವಣೆಯ ನಂತರ ಎಲ್ಲಾ ಸದಸ್ಯರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com