ಕೊರಟಗರೆ: ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಪರೀಕ್ಷೆಯ ಲ್ಲಿ ಶೇ.93 ರಷ್ಟು ಅಂಕ ಪಡೆದ ಬಿ.ಆರ್. ವೀಣಾಗೆ ಸರ್ಕಾರದಿಂದ ಗಣಕ ಯಂತ್ರ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಬುಕ್ಕಾಪಟ್ಟಣದ ರೈತ ರಾಜಣ್ಣನವರ ಮಗಳಾದ ವೀಣಾಗೆ ಸರ್ಕಾರದ ನಿಯಮದಂತೆ ಎಸ್ಎಸ್ಎಲ್ಸಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗಣಕ ಯಂತ್ರ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಿದೆ. ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗೋಂದಿಹಳ್ಳಿ ನಟರಾಜು, ಮುಖ್ಯಶಿಕ್ಷಕ ಪುಟ್ಟಸ್ವಾಮಿ, ಬಿಇಒ ಕಚೇರಿಯ ವೀರಭದ್ರಯ್ಯ, ರಂಗರಾಜು ಇದ್ದರು.
ಬ್ಯೂಟಿಪಾರ್ಲರ್ ತರಬೇತಿಗೆ ನೇರ ಸಂದರ್ಶನ
ತುಮಕೂರು ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮಿಪ್ಸೆಡ್ ಸಂಸ್ಥೆಯಿಂದ ನಿರುದ್ಯೋಗಿ ಯುವತಿಯರಿಗಾಗಿ ಹಮ್ಮಿಕೊಂಡಿರುವ 30 ದಿನಗಳ ಬ್ಯೂಟಿ ಪಾರ್ಲರ್ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಗಸ್ಟ್ 4 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಸಂದರ್ಶನವು ಮಿಪ್ಸೆಡ್ ತರಬೇತಿ ಸಂಸ್ಥೆಯಲ್ಲಿ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದೆ. ಈಗಾಗಲೇ ತರಬೇತಿಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಅರ್ಜಿ ಸಲ್ಲಿಸದೆ ಇರುವವರು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9480041026 ಅನ್ನು ಸಂಪರ್ಕಿಸಲು ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.
ಕಲಿಯುಗದಲ್ಲಿ ಧರ್ಮ ದಾರಿ ತಪ್ಪಿದೆ: ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಬದುಕುಶ್ರೇಷ್ಠ ಆದ್ದರಿಂದ ನಾವು ಜೀವನದಲ್ಲಿ ಉತ್ತಮ ಬದುಕು ನಡೆಸಬೇಕು ಎಂದು ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ನುಡಿದರು. ತಾಲೂಕಿನ ಕುಪ್ಪೂರು -ಗದ್ದಿಗೆ ಮಠದಲ್ಲಿ ಡಾ. ಯತೀಶ್ವರ ಶಿವಾಚಾರ್ಯ ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕನ್ನು ನಾವೇ ನಿರ್ಮಾಣ ಮಾಡಿಕೊಳ್ಳ ಬೇಕಾಗಿರುವುದರಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳುದು ಶ್ರೇಯಸ್ಕರ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ತಮ್ಮ 12ನೇ ವಯಸ್ಸಿನಲ್ಲಿ ಸಮಾಜ ಸೇವೆಗೆಂದು ಈ ಜವಾಬ್ದಾರಿ ಹೊರಿಸಿದ ಹಿರಿಯ ಶ್ರೀಗಳ ಆಶಯವನ್ನು ನಾನು ಪೂರೈಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಅವರ ನಿರೀಕ್ಷೆಯ ಮಟ್ಟಕ್ಕಲ್ಲದಿದ್ದರು ನನ್ನ ಕೈಲಾದ ಮಟ್ಟಿಗೆ ಭಕ್ತರ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೇನೆ ಎಂದರು. ವೃತ್ತನಿರೀಕ್ಷಕ ಜಯಕುಮಾರ್, ಪಿಎಸ್ಐ ಸುನೀಲ್, ಹಿರೇಮಠ್, ವಾಣಿಚಂದ್ರಯ್ಯ ಇದ್ದರು.