ತುರುವೇಕೆರೆ: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಹಾಗೂ ರಾಜ್ಯಾದ್ಯಂತ ನಡೆಯತ್ತಿರುವ ಅತ್ಯಾಚಾರ ಪ್ರಕರಣ ಖಂಡಿಸಿ ತಾಲೂಕು ಕನ್ನಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಶಾಸಕ ಸಂಭಾಜಿ ಪಾಟೀಲ್ ಮಹಾರಾಷ್ಟ್ರದ ಪರ ದನಿ ಎತ್ತಿ ಕನ್ನಡಿಗರ ಮನಸ್ಸನ್ನು ನೋಯಿಸಿದ್ದಾರೆ. ಕೂಡಲೇ ಅವರ ಶಾಸಕತ್ವ ರದ್ದು ಮಾಡಬೇಕೆಂದು ರಾಜ್ಯಾಧ್ಯಕ್ಷ ಆರ್. ವಿಜಯಕುಮಾರ್ ಆಗ್ರಹಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಂಇಎಸ್ ವರ್ತನೆ ಖಂಡಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಶಾಸಕ ಸಂಬಾಜಿ ಪಾಟೀಲ್ ಪ್ರತಿಕೃತಿ ದಹಿಸಿದರು. ರಾಜ್ಯಾದ್ಯಂತ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ತಾಲೂಕು ಕರವೇ ಗೌರವಾಧ್ಯಕ್ಷ ಅಸ್ಲಾಂ ಪಾಷ, ತಾಲೂಕು ಅಧ್ಯಕ್ಷ ಡ್ಯಾನಿಯಲ್, ರಾಜ್ಯ ಸಂಚಾಲಕ ಮುಶೀರ್ ಅಹಮದ್, ಎಚ್. ಸ್ವರ್ಣಕುಮಾರ್ ಭಾಗವಹಿಸಿದ್ದರು.