ರಾಮಕೃಷ್ಣಾಶ್ರಮ ದೇಶದ ಜೀವನಾಡಿ

ತುಮಕೂರು: ದೇಶಾದ್ಯಂತ ಕ್ರಿಯಾಶೀಲವಾಗಿರುವ, ಸಮಾಜಕ್ಕೆ ನೈತಿಕ, ಧಾರ್ಮಿಕ ಹಾಗು ಆಧ್ಯಾತ್ಮಿಕ ಮೌಲ್ಯಗಳನ್ನು ನಿರಂತರವಾಗಿ ಪರಿಚಯಿಸಿ ಮಾರ್ಗದರ್ಶನ ನೀಡುತ್ತಿರುವ ರಾಮಕೃಷ್ಣಾಶ್ರಮಗಳು ದೇಶದ ಜೀವನಾಡಿಗಳು. ಅವು ಯಾವುದೇ ಜಾತಿಗೆ ಸೀಮಿತವಾಗದೆ ಮಾನವೀಯತೆಯ ದೃಷ್ಟಿಯಿಂದ ಎಲ್ಲರ ಬದುಕಿಗೂ ಸಾಂತ್ವನ, ಭರವಸೆಗಳನ್ನು ನೀಡುತ್ತಿರುವ ಸಂಜೀವಿನಿ ಎಂದು ಪತ್ರಕರ್ತ ಎಸ್. ನಾಗಣ್ಣ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ರಾಮಕೃಷ್ಣ- ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಪಾಮಯಿ ಮಕ್ಕಳ ಬಳಗದ 8ನೇ ವಾರ್ಷಿಕೋತ್ಸವ ಸಂಸ್ಕೃತಿ ಸುಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಇಂದಿನ ಬದುಕಿನ ಎಲ್ಲ ತುಮುಲಗಳಿಗೆ ದಿವ್ಯತ್ರಯರ ಜೀವನ ಹಾಗು ಸಂದೇಶಗಳು ದಿವ್ಯೌಷಧ. ಸಮಾಜದ ನೈತಿಕ ಹಾಗು ಆಧ್ಯಾತ್ಮಿಕ ಸಮುನ್ನತಿಗೆ ಶ್ರಮಿಸುತ್ತಿರುವ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮವು ಎರಡು ತಲೆಮಾರುಗಳು ಸಾಧಿಸಬಹುದಾದದ್ದನ್ನು ಕೇವಲ ಎರಡು ದಶಕಗಳಲ್ಲಿ ಸಾಧಿಸಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರುಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಉದ್ದೇಶವನ್ನು ಹೊಂದಿರುವ ಕೃಪಾಮಯಿ ಮಕ್ಕಳ ಬಳಗಗಳಂತಹ ಸಂಸ್ಥೆಗಳು ಹೆಚ್ಚಬೇಕಿದೆ ಎಂದರು.
ಕಳೆದ 8 ವರ್ಷಗಳಿಂದ ಪರಿಣಾಮಕಾರಿಯಾಗಿ ಬಳಗವನ್ನು ಮುನ್ನಡೆಸುತ್ತಿರುವ ತಾಯಿ ಸುನಂದಮ್ಮ ಹಾಗೂ ರಂಗನಾಥ್ ಅವರ ಸಮರ್ಪಣಾ ಮನೋಭಾವ ಶ್ಲಾಘನೀಯ ಎಂದು ನುಡಿದರು.
ಕಠಿಣ ಪರಿಶ್ರಮ ಅಗತ್ಯ: ಸಾನಿಧ್ಯ ವಹಿಸಿದ್ದ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತೀ ಸ್ವಾಮೀಜಿಯವರು ಮಾತನಾಡಿ ಜೀವನದಲ್ಲಿ ಯಶಸ್ಸು ಪಡೆಯಬೇಕೆಂಬುವವರು ಕಠಿಣ ಪರಿಶ್ರಮ ಪಡಬೇಕು. ಸೋಲುಗಳಿಗೆ ಹೆದರದೆ, ನಿರಾಶೆ, ಖಿನ್ನತೆಗಳಿಗೆ ಬಾಗದೆ ಪ್ರಯತ್ನ ಮುಂದುವರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮಕ್ಕಳು ತಮ್ಮ ಬೌದ್ಧಿಕ ಸಾಮರ್ಥ್ಯದ ಜೊತೆಗೆ ಭಾವನಾತ್ಮಕವಾಗಿಯೂ ಬೆಳೆದಾಗ ಅವರು ಕಲಿತ ವಿದ್ಯೆ ತಮಗೂ ಹಾಗು ಸಮಾಜಕ್ಕೂ ಉಪಯುಕ್ತವಾಗಿ ಪರಿಣಮಿಸುತ್ತದೆ ಎಂದರು.
ಬಳಗದ ವಾರ್ಷಿಕ ಪತ್ರಿಕೆ ಕಿಶೋರ ಸೌರಭವನ್ನು ತುಮಕೂರಿನ ಖ್ಯಾತ ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ಅವರು ಬಿಡುಗಡೆ ಮಾಡಿದರು. ಆಶ್ರಮದ ಸ್ವಾಮಿ ಧೀರಾನಂದಜೀ ಹಾಗು ವಿಶೇಷ ಆಹ್ವಾನಿತರಾಗಿ ಶಶಿಕಲಾ ಚಂದ್ರಶೇಖರ್ ಅವರು ಆಗಮಿಸಿದ್ದರು. ಬಳಗದ ಮಕ್ಕಳು ನಡೆಸಿಕೊಟ್ಟ ಭಾಷಣ, ಕೋಲಾಟ ಹಾಗೂ ಪ್ರತಿಮಾನಾಟಕ ಪ್ರೇಕ್ಷಕರ ಮನ ಸೆಳೆಯಿತು. ಕಾರ್ಯಕ್ರಮವನ್ನು ನಿವೇದಿತಾ ನಿಕೇತನದ ಸ್ವಾತಿ ನಿರೂಪಿಸಿದರೆ ಭಾನುಪ್ರಿಯ ಸ್ವಾಗತಿಸಿ ವಂದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com