ಉಡುಪಿ: ಇಲ್ಲಿಗೆ ಸಮೀಪದ ಕೆಮ್ಮಣ್ಣು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋನ್ಸೆ- ಖಂಡಿಗೆ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಸೋಮವಾರ ಗಾಳಿ-ಮಳೆ ಅಬ್ಬರಕ್ಕೆ ಕುಸಿದಿದ್ದು ಅದೃಷ್ಟವಶಾತ್ ಶಾಲೆಯಲ್ಲಿದ್ದ ಮಕ್ಕಳು ಪಾರಾಗಿದ್ದಾರೆ.
ಸ್ಥಳೀಯರ ಪ್ರಕಾರ ಸುಮಾರು 125 ವರ್ಷಗಳ ಹಿಂದಿನ ಈ ಅನುದಾನಿತ ಶಾಲೆಯಲ್ಲಿ ಸುಮಾರು 60 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಇದೇ ಕೊಠಡಿಯಲ್ಲಿ ಪಾಠ ನಡೆಯುತ್ತಿರುವ ಸಂದರ್ಭ ಗೋಡೆ ಬಿರುಕು ಬಿಟ್ಟಿದ್ದನ್ನು ಗಮಸಿದ ಶಿಕ್ಷಕರು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದಿದ್ದಾರೆ. ಕೂಡಲೆ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಸುಮಾರು 2 ಗಂಟೆ ಹೊತ್ತಿಗೆ ಬೀಸಿದ ಗಾಳಿ- ಮಳೆಗೆ ಗೋಡೆ ಸಂಪೂರ್ಣ ನೆಲಕಚ್ಚಿದ್ದು ಮುಂಜಾಗರೂಕತೆ ಕೈಗೊಂಡ ಹಿನ್ನೆಲೆಯಲ್ಲಿ ಮಕ್ಕಳು ಪಾರಾಗಿದ್ದಾರೆ.
ಸಮುದ್ರದ ಬದಿಯಲ್ಲಿ ಈ ಶಾಲೆ ಇರುವ ಕಾರಣ ವಿಪರೀತ ಗಾಳಿ ಬೀಸುತ್ತಿರುತ್ತದೆ. ಅಲ್ಲದೆ ಶಾಲೆಯ ಗೋಡೆ ಮಣ್ಣಿನಿಂದ ಕಟ್ಟಿದ್ದು ಈ ಕಾರಣದಿಂದ ಗೋಡೆ ಕುಸಿದಿದೆ.
ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಸದಸ್ಯ ಟಿ.ಎಂ ರೆಹಮತುಲ್ಲಾ, ಶಾಲಾ ಆಡಳಿತ ಮಂಡಳಿ ಕಟ್ಟಡವನ್ನು ಕಟ್ಟಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
ಈ ವಿಚಾರದಲ್ಲಿ ತಾವು ಸಂಪೂರ್ಣ ಸಹಕಾರ ನೀಡುತ್ತೇನೆ.
ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
Advertisement