ನಂದಳಿಕೆ: ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ ಉದ್ಘಾಟನೆ
ಕಾರ್ಕಳ: ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆತಾಗ ಪ್ರತಿಭೆಗಳು ಅರಳಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆದಿಂಜೆ ಸುಪ್ರಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಂದಳಿಕೆ ಬೋರ್ಡ್ ಶಾಲೆ ಆತಿಥ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ನಂದಳಿಕೆ ಶಾಲಾ ವಿದ್ಯಾವಿಕಾಸ ಸಮಿತಿ ಹಾಗೂ ಶಾಲಾಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ 14ರಿಂದ 17ರ ವಯೋವುತಿಯ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಮಾತನಾಡಿದರು. ಬೆಳ್ಮಣ್ ಪಂಚಾಯಿತಿ ಅಧ್ಯಕ್ಷ ಶಂಕರ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಕ್ಷೇವಿಯರ್ ಡಿಮೆಲ್ಲೋ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಉಡುಪಿಯ ಬಸವರಾಜ್, ನಂದಳಿಕೆ ಬೋರ್ಡ್ ಶಾಲಾ ವಿದ್ಯಾವಿಕಾಸ ಸಮಿತಿಯ ಶಶಿಧರ ಶೆಟ್ಟಿ, ಮೋಹನದಾಸ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗನ್ನಾಥ ಮೂಲ್ಯ ಮತ್ತಿತರರು ಇದ್ದರು. ಆತಿಥೇಯ ಶಾಲೆಯ ಕರಾಟೆ ಸಾಧಕಿ ಧನ್ಯ ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕಾರ್ಕಳ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಬು ಪೂಜಾರಿ ಸ್ವಾಗತಿಸಿದರು. ಶಿಕ್ಷಕಿಯರಾದ ಎಮಿಲ್ಡಾ ಹಾಗೂ ಸುಮತಿ ಪುರಸ್ಕೃತರ ವಿವರ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಹೊಳ್ಳ ವಂದಿಸಿದರು. ಸದಾನಂದ ಶೆಟ್ಟಿ ನಿರೂಪಿಸಿದರು.
