ಕುಂದಾಪುರ: ಶ್ವಾಸೋಚ್ಛಾಸ ಕ್ರಿಯೆ ನಡೆಯುವ ಪ್ರಾಣ, ಶರೀರದ ಕಶ್ಮಲಗಳನ್ನು ಹೊರಹಾಕುವ ಅಪಾನ, ಉತ್ಪನ್ನವಾಗುವ ರಸದ್ರವ್ಯಗಳನ್ನು ವಿವಿಧ ಅಂಗಗಳಿಗೆ ತಲುಪಿಸುವ ಸಮಾನ, ನರನಾಡಿಗಳಿಗೆ ಚೇತನ ನೀಡುವ ಉದಾನ, ಎಲ್ಲಾ ಚಟುವಟಿಕೆಗಳಿಗೆ ಸಹಾಯ ಮಾಡುವ ವ್ಯಾನ, ಹೇಗೆ ಮನುಷ್ಯನ ನಡೆನುಡಿಯನ್ನು ಒಂದಾಗಿಸಿ ಪಂಚ ಪ್ರಾಣ ಶಕ್ತಿಗೆ ಜೀವ ತುಂಬಿಸುವುದೇ ಯೋಗ ಎಂದು ಕಟ್ಕೆರೆ ಪ್ರಗತಿಪರ ರೈತ ಪ್ರೇಮಾನಂದ ಶೆಟ್ಟಿ ಹೇಳಿದರು.
ಅವರು ಬೀಜಾಡಿ- ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಸಾಂಸ್ಕೃತಿಕ ವಿಕಾಸ ಕೇಂದ್ರ (ರಿ) ಬ್ರಹ್ಮಾವರ, ಜ್ಞಾನ ವಿಕಾಸ ಯೋಗ ಕೇಂದ್ರ ಕುಂದಾಪುರ, ರೋಟರಿ ಕ್ಲಬ್ ಕೋಟೇಶ್ವರ, ಕರಾವಳಿ ಕ್ಲಬ್ ಬೀಜಾಡಿ ಮೆನ್ ಕ್ಲಬ್ ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನ ವಿಕಾಸ ಯೋಗ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಆಚಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಯೋಗ ತರಬೇತುದಾರೆ ಮುಕ್ತಾ ಮಾತಾಜೀ ಮಾತನಾಡಿ, ಅತೀ ವೇಗದಲ್ಲಿ ಮುಂದುವರಿದಾಗ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೇ ಮಾನವೀಯ ಮೌಲ್ಯ, ಸಂಬಂಧವನ್ನು ದಿನೇ ದಿನೇ ಕಳೆದುಕೊಳ್ಳುತ್ತಿದೇವೆ. ಚಂಚಲ ಮನಸ್ಸನ್ನು ನಿಗ್ರಹಿಸಿ ಜೀವನದ ಆರೋಗ್ಯ ಮತ್ತು ಆನಂದವನ್ನು ಪಡೆದು ಸುಂದರ ಬದುಕನ್ನು ಕಟ್ಟಿಕೊಳ್ಳಲು ಯೋಗದಿಂದ ಮಾತ್ರ ಸಾಧ್ಯ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸಂಜೀವ ಮಡಿವಾಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್, ಉದ್ಯಮಿ ಗಣೇಶ್ ಪುತ್ರನ್, ಕರಾವಳಿ ಫ್ರೆಂಡ್ಸ್ ಅಧ್ಯಕ್ಷ ಚಂದ್ರ್ಯನ್ಸ್ ಕ್ಲಬ್ ಅಧ್ಯಕ್ಷೆ ವಿಶಾಲಾಕ್ಷಿ ಆಚಾರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಯೋಗ ಸಾಧಕರಾದ ಕಲ್ಪನಾ ಭಾಸ್ಕರ್, ಶಂಕರ್ ಚಾತ್ರ, ಮಾಲತಿ ಬಂಗೇರ, ಸುರೇಶ್ ಬಟ್ಟಿನ್ ಯೋಗದ ಅನುಭವಗಳನ್ನು ಹಂಚಿಕೊಂಡರು.
ಗಣೇಶ್ ಗಂಗೊಳ್ಳಿ ಪ್ರಾರ್ಥಿಸಿದರು. ಗಣೇಶ್ ಪುತ್ರನ್ ಸ್ವಾಗತಿಸಿದರು.
ಉಪನ್ಯಾಸಕ ಸುಧಾಕರ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಡಿ ಮೆಸ್ಕಾಂ ಜೂನಿಯರ್ ಎಂಜಿನಿಯರ್ ಬಾಬಣ್ಣ ಪೂಜಾರಿ ನಿರೂಪಿಸಿದರು. ವಿಶಾಲಾಕ್ಷಿ ಆಚಾರ್ ವಂದಿಸಿದರು.
Advertisement