ಮಣಿಪಾಲ: ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವ ಮೊದಲು ಆಯಾ ಗ್ರಾಪಂನಿಂದ ಕಡ್ಡಾಯವಾಗಿ ನಿರಪೇಕ್ಷಣಾ ಪತ್ರ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಆದೇಶಿಸಿದ್ದಾರೆ.
ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೊಳವೆ ಬಾವಿ ವಿಫಲವಾದರೆ ಅದನ್ನು ಸರಿಯಾಗಿ ಮುಚ್ಚುವ ಸಂಪೂರ್ಣ ಹೊಣೆ ಅದನ್ನು ಕೊರೆಯುವ ಏಜೆನ್ಸಿಯದ್ದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳು ಸೇರಿ ಒಟ್ಟು 933 ವಿಫಲ ಕೊಳವೆ ಬಾವಿಗಳಿರುವುದನ್ನು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಈ ಬಾವಿಗಳಿರುವ ಪ್ರದೇಶಗಳನ್ನು ಪರಿಶೀಲಿಸಿ ಅವುಗಳ ಮುಚ್ಚಿವೆಯೋ ತೆರೆದಿವೆಯೋ ಎಂಬ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಅಲ್ಲದೇ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಪಂ ಕಾರ್ಯನಿರ್ವಹಣಾ ಅಧಿಕಾರಿಗಳು ಎಲ್ಲ ಗ್ರಾಪಂ ಪಿಡಿಒಗಳಿಗೆ ಸೂಕ್ತ ಸಲಹೆ ನೀಡಿ, ಕೊಳವೆ ಬಾವಿವಾರು ಮಾಹಿತಿಯನ್ನು ಕರಾರುವಕ್ಕಾಗಿ ಗ್ರಾಪಂ ಆಸ್ತಿ ವಹಿಯಲ್ಲಿ ನೋಂದಾಯಿಸುವಂತೆ ಸೂಚಿಸಿದ್ದಾರೆ.
ಅಲ್ಲದೇ ಜಿಲ್ಲೆಯಲ್ಲಿರುವ ಕೆಂಪು ಕಲ್ಲು ಮತ್ತು ಕಪ್ಪು ಕಲ್ಲು ಕೋರೆಗಳಿಗೆ ಬೇಲಿ ಹಾಕುವ ಪ್ರಗತಿ ಪರಿಶೀಲಿಸಿದ ಅವರು, ಇನ್ನಷ್ಟು ಪರಿಣಾಮಕಾರಿಯಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ, ಶೇ. 95ರಷ್ಟು ಗಣಿಗಾರಿಕೆ ಖಾಸಗಿ ಭೂಮಿಯಲ್ಲಿ ಆಗುತಿದ್ದು, ಪ್ರತಿಯೊಬ್ಬ ಖಾಸಗಿಯಾಗಿ ಕೋರೆ ಹೊಂದಿರುವವರಿಗೆ ವೈಯಕ್ತಿಕ ನೋಟೀಸು ನೀಡುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳಿಗೆ ಆದೇಶ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಿರಂಜನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ, ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಮಹಿಳಾ- ಮಕ್ಕಳ ಕಲ್ಯಾಣಾಧಿಕಾರಿ ರಾಜೇಂದ್ರ ಬೇಕಲ್ ಉಪಸ್ಥಿತರಿದ್ದರು.
Advertisement