ಮಣಿಪಾಲ: ಉಡುಪಿ ಜಿಲ್ಲೆಯೂ ಸೇರಿದಂತೆ 5 ಜಿಲ್ಲೆಗಳಲ್ಲಿ 13ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ರಸ್ತೆ ಕಾಮಗಾರಿಗಳನ್ನು ಟೆಂಡರ್ ಮೂಲಕ ನಡೆಸುವುದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವರ ಆದೇಶಕ್ಕೆ ಉಡುಪಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬುಧವಾರ ಪಕ್ಷಭೇದ ಮರೆತು ವಿರೋಧಿಸಲಾಯಿತು. ಅಗತ್ಯ ಬಿದ್ದರೇ ಈ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲೂ ನಿರ್ಧರಿಸಲಾಯಿತು.
ಇದುವರೆಗೆ ಜಿ.ಪಂ.ಗೆ ಬಿಡುಗಡೆಯಾಗುತ್ತಿದ್ದ ಈ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಸಲ್ಲಿಸುತ್ತಿದ್ದ ಕ್ರಿಯಾಯೋಜನೆಯಂತೆ ರಸ್ತೆ ಕಾಮಗಾರಿಗಳನ್ನು ನಡೆಸಲಾಗುತ್ತಿತ್ತು.
ಆದರೆ, ಈಗ ಗ್ರಾಮೀಣಾಭಿವೃದ್ಧಿ ಸಚಿವರು ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದಿದ್ದು, ಉಡುಪಿ ಮತ್ತು ಇತರ 4 ಜಿ.ಪಂ.ಗಳು ಈ ಬಾರಿ ರಸ್ತೆ ಕಾಮಗಾರಿಗೆ ಕ್ರಿಯಾಯೋಜನೆ ಮಾಡುವಂತಿಲ್ಲ. ಈ ಕಾಮಗಾರಿಗೆ ಟೆಂಡರು ಕರೆಯಲಾಗುವುದು ಎಂದು ಹೇಳಿದ್ದಾರೆ.
ಈ ವಿಷಯವನ್ನು ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಆನಂತ ಮೂವಾಡಿ ಅವರು ಪ್ರಸ್ತಾಪ ಮಾಡಿದರು. ಇದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಒಕ್ಕೊರಲ ಬೆಂಬಲ ನೀಡಿದರು.
ಇದಕ್ಕೆ ಉತ್ತರಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ ತಮಗೆ ಕ್ರಿಯಾಯೋಜನೆ ಸರ್ಕಾರಕ್ಕೆ ಸಲ್ಲಿಸದಂತೆ ಸಚಿವರ ಆದೇಶ ಬಂದಿರುವುದಾಗಿ ಹೇಳಿ ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೆ ಸದಸ್ಯರಾದ ಮಂಜುನಾಥ ಪೂಜಾರಿ, ಗಣಪತಿ ಶ್ರೀಯಾನ್, ಉಪೇಂದ್ರ ನಾಯಕ್, ಕಟಪಾಡಿ ಶಂಕರ ಪೂಜಾರಿ ಮುಂತಾದವರು ಪಕ್ಷ ಮರೆತು, ಸಚಿವರು ಏನು ಬೇಕಾದರೂ ಹೇಳಲಿ, ಇದು ಜಿಪಂನ ಅಸ್ತಿತ್ವದ ಪ್ರಶ್ನೆ. ಜಿ.ಪಂ. ಸ್ವತಂತ್ರ ಸಂಸ್ಥೆ, ಆದ್ದರಿಂದ ಜಿಲ್ಲಾ ಪಂಚಾಯಿತಿ ಸದಸ್ಯರು ಹೇಳಿದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಲೇಬೇಕು.
ಅದನ್ನು ಬಿಟ್ಟು ಶಾಸಕರೋ ಇನ್ಯಾರೋ ಹೇಳಿದ ಕಾಮಗಾರಿಗಳಿಗೆ ಈ ಅನುದಾನ ನೀಡುವುದನ್ನು ತಾವು ಒಪ್ಪುವುದಿಲ್ಲ. ಆದ್ದರಿಂದ ಜಿಪಂನಿಂದಲೇ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸೋಣ ಎಂದರು. ಸರ್ಕಾರ ಸ್ವೀಕರಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸೋಣ ಎಂದು ನಿರ್ಧಾರ ಕೈಗೊಳ್ಳಲಾಯಿತು.
ಜಿ.ಪಂ. ಪ್ರಭಾರ ಅಧ್ಯಕ್ಷ ಉದಯ ಕೋಟ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಸದಸ್ಯ ಗಣಪತಿ ಶ್ರೀಯಾನ್, ಅರುಣಕುಮಾರ್ ಶೆಟ್ಟಿ, ಸಿಇಓ ಕನಗವಲ್ಲಿ, ಉಪಕಾರ್ಯದರ್ಶಿ ಪ್ರಾಣೇಶ್ ರಾವ್, ಯೋಜನಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ಮುಖ್ಯ ಲೆಕ್ಕಾಧಿಕಾರಿ ತಿಮ್ಮಪ್ಪ ವೇದಿಕೆಯಲ್ಲಿದ್ದರು.
ಅಧಿಕಾರಿಗಳ ಮೇಲೆ ಸದಸ್ಯರು ಗರಂ
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವ ಜಿ.ಪಂ. ಸಾಮಾನ್ಯ ಸಭೆಗೆ ಕೆಲವು ಅಧಿಕಾರಿಗಳು ಬರುತ್ತಿಲ್ಲ. ಕೆಲವು ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಸಭೆಯಲ್ಲಿ ಕೆಲವು ವಿಷಯಗಳ ಚರ್ಚೆಯಾಗಿ 2- 3 ತಿಂಗಳು ಕಳೆದರೂ ಅಧಿಕಾರಿಗಳು ಇನ್ನೂ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ, ಕೆಲವು ಅಧಿಕಾರಿಗಳು ವಿಷಯ ಅಧ್ಯಯನ ಮಾಡಿ ಬಾರದೇ ಕೇವಲ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಹೀಗಾದರೇ ಜಿ.ಪಂ. ಸಭೆ ನಡೆಸುವುದಾದರೂ ಏಕೆ? ಹೇಗೆ? ಹೀಗೆ ಮುಂದುವರಿದರೇ ಸದಸ್ಯರು ಸಭೆಗೆ ಬರುವುದಿಲ್ಲ ಎಂದು ನಿರ್ಣಯ ಕೈಗೊಳ್ಳೋಣ.
ಉದಯ ಕೋಟ್ಯಾನ್, ಪ್ರಭಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ
Advertisement