ನದೀಮುಲ್ಲಾ ಶೀಘ್ರವೇ ಕೆಜೆಪಿಗೆ?

Updated on: 

ಸಿಂಧನೂರು: ನಗರಸಭೆಯ ಉಪಾಧ್ಯಕ್ಷ ಹಾಗೂ ಜೆಡಿಎಸ್ ಯುವ ಮುಖಂಡ ನದೀಮುಲ್ಲಾ ಫೆ.12ರವರೆಗೆ ಮಾತ್ರ ಜೆಡಿಎಸ್‌ನಲ್ಲಿ ಇರುತ್ತಾರೆ... ಹೌದು, ನದೀಮುಲ್ಲಾ ಅವರ ಉಪಾಧ್ಯಕ್ಷ ಅವಧಿ ಫೆ.12ಕ್ಕೆ ಪೂರ್ಣಗೊಳ್ಳಲಿದ್ದು, ಮುಂದಿನ ನಗರಸಭೆ ಚುನಾವಣೆಗೆ ಸ್ಪರ್ಧಿಗೆ ಸುಗಮ ದಾರಿ ಕಂಡುಕೊಳ್ಳಲು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅವರ ಆಪ್ತ ವಲಯ ಖಚಿತಪಡಿಸಿದೆ.
ಜೆಡಿಎಸ್ ನಗರ ಘಟಕದ ಅಧ್ಯಕ್ಷರಾಗಿ, ಶಾಸಕ ವೆಂಕಟರಾವ್ ನಾಡಗೌಡರ ನಿಕಟವರ್ತಿಯಾಗಿದ್ದ ನದೀಮುಲ್ಲಾ ಪಕ್ಷಾಂತರ ನಿರ್ಧಾರ ಕೈಗೊಂಡಿರುವುದು ಅವರ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ. ಸಿಂಧನೂರು ತಾಲೂಕಿನಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರಾಜಶೇಖರ ಪಾಟೀಲ್, ನದೀಮುಲ್ಲಾ ಪ್ರತಿನಿಧಿಸುವ ವಾರ್ಡ್‌ನಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಅಲ್ಲದೆ, ಮಹಿಬೂಬಿಯಾ ಕಾಲೊನಿಯಲ್ಲಿ ಬರುವ ಮೂರು ವಾರ್ಡ್‌ಗಳಲ್ಲಿ ಪಾಟೀಲರ ಸಹೋದರ ಎಂ.ಬಿ. ಪಾಟೀಲ್ ಅವರು ಅಲ್ಲಿನ ಜನರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆಂದು ಹೇಳಲಾಗಿದೆ. ಈ ವಾರ್ಡಗಳಲ್ಲಿನ ನೂರಾರು ಜನರಿಗೆ ಪಾಟೀಲರ ಕುಟುಂಬ ನಿವೇಶನಗಳನ್ನು ನೀಡಿರುವುದರಿಂದ ಆ ಕುಟುಂಬದ ಬಗ್ಗೆ ವಿಶೇಷ ಪ್ರೀತಿ ಇದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನದೀಮುಲ್ಲಾ ಮುಂದಿನ ಬಾರಿ ನಗರಸಭೆ ಸದಸ್ಯರಾಗಿ ಚುನಾಯಿತರಾಗಲು ಕೆಜೆಪಿ ಅಪ್ಪಿಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ ಅವರು ತಮ್ಮ ನಗರಸಭೆ ಉಪಾಧ್ಯಕ್ಷರ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಕೆಜೆಪಿ ಸೇರಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com