ಸಕಾಲ ಸಮಸ್ಯೆ ಬಗೆಹರಿಸಿ

Updated on: 

ಶಿರಸಿ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಕಾಲ ಜಾರಿ ಆದ ನಂತರ ಸಾರ್ವಜನಿಕರು ಮತ್ತು ರೈತರಿಗೆ ಆಗುತ್ತಿರುವ ತೊಂದರೆ ಪರಿಹರಿಸಬೇಕೆಂದು ಆಗ್ರಹಿಸಿ ಜಿಪಂ ಮಾಜಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ್ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಪರದಾಟ: ಸಕಾಲ ಯೋಜನೆ ಜಾರಿಯಾದರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲ ಆಗುತ್ತದೆ ಎಂಬ ವಿಶ್ವಾಸದಿಂದ ಸರ್ಕಾರ ಯೋಜನೆ ಜಾರಿ ಮಾಡಿದೆ. ಆದರೆ, ಸಾಕಾರ ಆಗಬೇಕಾದ ಸಕಾಲ ಜನರ ಶಾಪಕ್ಕೆ ಗುರಿ ಆಗುತ್ತಿದೆ. ಇದು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ, ಜಿಡ್ಡುತನ ಹಾಗೂ ಸಾರ್ವಜನಿಕರಿಗೆ ನೀಡಬೇಕಾದ ಸ್ಪಂದನೆ ಕೊರತೆಯಿಂದಾಗಿ ಸಕಾಲ ಯೋಜನೆ ಅಕಾಲ ಯೋಜನೆಯಾಗಿ ಕಾಗದ ಪತ್ರ, ಮೂಲ ದಾಖಲೆ ಪಡೆದುಕೊಳ್ಳಲು ಹಾಗೂ ಕೆಲಸ ಕಾರ್ಯ ಮಾಡಿಕೊಳ್ಳಲು ಹೆಚ್ಚು ಪರದಾಡುವಂತಾಗಿದೆ.
ಯಾವುದೇ ಕಾಗದ ಪತ್ರ, ದಾಖಲೆ ಪಡೆಯಲು ಈ ಹಿಂದೆ ಕೆಲವಿಷ್ಟು ದಾಖಲೆಗಳ ಕೆಲಸದ ಬಗ್ಗೆ ಸಾದಾ ಅರ್ಜಿ ನೀಡಿದರೆ ಎರಡು-ಮೂರು ದಿನದೊಳಗೆ ಆಗುತ್ತಿತ್ತು. ಈಗ ಸಕಾಲ ಯೋಜನೆಯಿಂದ ಅಧಿಕಾರಿಗಳು ನಿಗದಿತ ನಮೂನೆ ಫಾರಂ ನೀಡಿಯೇ ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಲು ಸೂಚಿಸುತ್ತಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಲಗತ್ತಿಸದಿದ್ದಲ್ಲಿ ಅರ್ಜಿ ತಿರಸ್ಕಾರ ಮಾಡಿ ಕೈ ಚೆಲ್ಲುತ್ತಾರೆ. ಅರ್ಜಿದಾರನಿಗೆ ಆಗಬೇಕಾದ ಕೆಲಸ ಕಾರ್ಯಗಳು ಮಾತ್ರ ಗಗನ ಕುಸುಮವಾಗಿದೆ. ಹಳೇ ಪದ್ಧತಿಯಾದರು ಬೇಕು. ಹೊಸ ಪದ್ಧತಿಯ ಸಕಾಲ ಸಾಕೆಂಬಂತಾಗಿದೆ. ಪಂಚಾಯಿತಿಯಲ್ಲಿ ಮನೆ ಕುರಿತಾದ ಎನ್‌ಓಸಿ ಪಡೆದುಕೊಳ್ಳಲು ಈ ಮೊದಲು ಸಾದಾ ಅರ್ಜಿ ನೀಡಿದರೆ ಎನ್‌ಓಸಿ ಲಭ್ಯವಾಗುತ್ತಿತ್ತು. ಸಕಾಲದಲ್ಲಿ ಅರ್ಜಿ ನೀಡಿದಲ್ಲಿ ಸದರಿ ಎನ್‌ಓಸಿಗಳ ಬಗ್ಗೆ ಟ್ಯಾಕ್ಸ್‌ರಶೀದಿ, ಇತರೆ ಕಾಗದ ಪತ್ರ ಲಗತ್ತಿಸಿಟ್ಟು ಅರ್ಜಿ ನೀಡಲು ಅರ್ಜಿದಾರರಿಗೆ ತಿಳಿಸುತ್ತಿದ್ದರಿಂದ ಸಾರ್ವಜನಿಕರಿಗೆ ಅನಾವಶ್ಯಕ ಕಿರಿ ಕಿರಿ ಹಾಗೂ ತಿರುಗಾಟ ಆಗುತ್ತದೆ. ಆ ರೀತಿ ಟ್ಯಾಕ್ಸ್ ಭರ್ತಿ ಮಾಡಿದ ಮಾಹಿತಿ ಅದೇ ಪಂಚಾಯಿತಿಯಲ್ಲಿ ಲಭ್ಯವಿದ್ದಲ್ಲಿಯೂ ಸಹ ಈ ಬಗ್ಗೆ ಪುನಃ ಅದೇ ದಾಖಲೆ ಕೇಳುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಸಕಾಲದಿಂದ ಜನಸಾಮಾನ್ಯರಿಗೆ ಆಗುವ ತೊಂದರೆ, ಖರ್ಚು ಹಾಗೂ ತಿರುಗಾಟ ತಪ್ಪಿಸುವುದು ತೀರಾ ಅನಿವಾರ್ಯ ಹಾಗೂ ಅವಶ್ಯವಿದ್ದು, ಕೂಡಲೇ ಹಳೇ ಪದ್ಧತಿಯಲ್ಲೂ ಸಹ ಅರ್ಜಿ ಸ್ವೀಕರಿಸುವಂತಾಗಿ, ಹೊಸ ಸಕಾಲ ಯೋಜನೆ ಬಗ್ಗೆ ತೊಂದರೆ, ತೊಡಕು ಪರಿಹರಿಸಿಕೊಡುವಂತೆ ವಿನಂತಿಸುತ್ತೇನೆ ಎಂದು ಜಿ.ಎನ್. ಹೆಗಡೆ ಮುರೇಗಾರ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com