ಶಿರಸಿ: ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಫೆ. 9ರಿಂದ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯ್ಕ ತಿಳಿಸಿದರು.
ಅವರು ಸೋಮವಾರ ನಗರದ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ. 9, 10, 11ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಫೆ. 10, 11ರಂದು ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಫೆ. 9ರ ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಪಂ ಅಧ್ಯಕ್ಷ ಕೃಷ್ಣ ಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಪ್ರದರ್ಶನ ಮಳಿಗೆಯನ್ನು, ಸಂಸದ ಅನಂತಕುಮಾರ ಹೆಗಡೆ ಪುಷ್ಪ ಜೋಡಣೆ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಗೇರು ಅಭಿವೃದ್ಧಿ ನಿಗಮದ ವಿನೋದ ಪ್ರಭು, ತಾಪಂ ಅಧ್ಯಕ್ಷ ಗುರುಪಾದ ಎಂ. ಹೆಗಡೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಉಪ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದರು.
ತಾಜಮಹಲ್ ಪ್ರತಿಕೃತಿ: ಫೆ. 8ರಂದು ಕಚೇರಿ ಆವರಣದಲ್ಲಿ ಮಧ್ಯಾಹ್ನ 3ಕ್ಕೆ ಹೂ ಜೋಡಣೆ ಹಾಗೂ ಬೋನ್ಸಾಯಿ ತರಬೇತಿ ಕಾರ್ಯಕ್ರಮ, ಫೆ. 9ರ ಬೆಳಗ್ಗೆ 9ಕ್ಕೆ ಪುಷ್ಪ ರಂಗೋಲಿ, ಹೂ ಜೋಡಣೆ ಸ್ಪರ್ಧೆ ಆಯೋಜಿಸಲಾಗಿದೆ. ತರಬೇತಿ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕಚೇರಿಯ ದೂರವಾಣಿ ಸಂಖ್ಯೆ 08384-225829 ಇದಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಳೆದ ವರ್ಷದ ಕಾರ್ಯಕ್ರಮದಲ್ಲಿ ಈಶ್ವರ, ನಂದಿ, ಯಕ್ಷಗಾನ ಕಲಾವಿದ, ಗಣಪತಿ ಈ ಮುಂತಾದ ವೇಷಗಳನ್ನು ಹೂವುಗಳಿಂದ ತಯಾರಿಸಲಾಗಿತ್ತು. ಈ ಸಾರಿ ತಾಜಮಹಲ್ ಪ್ರತಿಕೃತಿಯನ್ನು ತಯಾರಿಸಲಾಗುತ್ತದೆ. ಪ್ರದರ್ಶನದ ಸಂದರ್ಭದಲ್ಲಿ ಆಲಂಕಾರಿಕ ಗಿಡಗಳಾದ ಚೆಂಡು ಹೂ, ಸೆಲ್ಫಿಯಾ (ರೆಡ್), ಪೆಟೋನಿಯಾ, ನಿತಿಪುಷ್ಪ, ವಿಂಕಾ ಗಿಡಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೃಷಿ ಮತ್ತು ತೋಟಗಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಈ ಕುರಿತು ಕಚೇರಿಯನ್ನು ಸಂಪರ್ಕಿಸಬೇಕು ಎಂದು ನಾಯ್ಕ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಸತೀಶ ಹೆಗಡೆ, ಗಣೇಶ ಹೆಗಡೆ ಹಾಗೂ ಶಿರಸಿ ತಾಲೂಕು ಕೃಷಿಕ ಸಮಾಜದ ಎಸ್.ಎನ್. ಭಟ್ಟ ಉಪಸ್ಥಿತರಿದ್ದರು.