ಅಂಕೋಲಾ: ಯಾವುದೇ ಒಂದು ಸಮಾಜವನ್ನು ಉತ್ತುಂಗಕ್ಕೇರಿಸುವಲ್ಲಿ ಶೈಕ್ಷಣಿಕ ರಂಗವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನರಿತು ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆಯುಂತಾಗಬೇಕು ಎಂದು ರಾಜ್ಯ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ ಪ್ರತಿಪಾದಿಸಿದರು.
ಪಟ್ಟಣದ ಶ್ರೀ ಆರ್ಯದುರ್ಗಾ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ವಾರ್ಷಿಕ ಸಮ್ಮೇಳನ, ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಕೊಂಕಣ ಸಾರಸ್ವತ ಸಮಾಜದ ಉಪಾಧ್ಯಕ್ಷ ರಾಮದಾಸ ಕುಮಟೇಕರ, ಸಾಮಾಜಿಕ ಕಾರ್ಯಕರ್ತ ಅರುಣ ಅಂಕೋಲೆಕರ, ಮುಂಬೈ ಆರ್ಐಎಲ್ನ ಉಪಾಧ್ಯಕ್ಷ ಸಂತೋಷ ದೇವಳಕರ, ಪ್ರಮುಖರಾದ ನಾಗರಾಜ ನಾರ್ವೇಕರ, ಕಾರವಾರ ನಗರಸಭಾ ಸದಸ್ಯೆ ಸ್ನೇಹಾ ಬಾಡಕರ, ಯಲ್ಲಾಪುರ ಗೋಮಾಂತಕ ಸೇವಾ ಸಮಿತಿ ಸದಸ್ಯ ರವೀಂದ್ರ ಕೊಡ್ಕಣಿ, ಆದಾಯ ತೆರಿಕೆ ನಿರೀಕ್ಷಕ ದೇವದಾಸ ಶೇಜವಾಡಕರ, ಆಹಾರ ನಿರೀಕ್ಷಕ ಗಿರೀಶ ಜಾಂಬವಳಿಕರ ಮತ್ತಿತರರು ಮಾತನಾಡಿದರು. ಗೋಮಾಂತಕ ಸಮಾಜದ ತಾಲೂಕು ಉಪಾಧ್ಯಕ್ಷ ದಿನಕರ ಅಂಕೋಲೆಕರ, ಕಾರ್ಯದರ್ಶಿ ನಾಗೇಂದ್ರ ಬಾನಾವಳಿ, ಖಜಾಂಚಿ ತ್ರಯಂಬಕ ಬಾಂದೇಕರ, ಸಂಜಯ ಮೋದಿ ಇದ್ದರು. ಸೋನಾಲಿ ಸಂಗಡಿಗರ ಪ್ರಾರ್ಥಿಸಿದರು. ಗೋಮಾಂತಕ ಸಮಾಜದ ತಾಲೂಕಾಧ್ಯಕ್ಷ ಭಾಸ್ಕರ ನಾರ್ವೆಕರ ಸ್ವಾಗತಿಸಿದರು.
ಬಸ್ ಪಾಸ್ ಅವಧಿ ವಿಸ್ತರಣೆ
ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತಿದ್ದು, 2012ನೇ ಸಾಲಿನಲ್ಲಿ ವಿತರಿಸಿದ ಡಿ. 31, 2012ರ ವರೆಗೆ ಮಾನ್ಯತೆ ಹೊಂದಿರುವ ಪಾಸುಗಳನ್ನು ಜ. 31, 2013ರ ವರೆಗೆ ವಿಸ್ತರಿಸಿ ಮಾನ್ಯತೆ ಮಾಡಲಾಗಿತ್ತು. ಆದರೆ ಆಡಳಿತಾತ್ಮಕ ಕಾರಣಗಳಿಂದ ಜ. 31, 2013ರ ವರೆಗೆ ಮಾನ್ಯತೆ ಹೊಂದಿರುವ ಅಂಗವಿಕಲರ ರಿಯಾಯತಿ ದರದ ಪಾಸ್ಗಳನ್ನು ಫೆ. 28, 2013ರ ವರೆಗೆ ವಿಸ್ತಿರಿಸಿ ಮಾನ್ಯತೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಡಂಬಾರಿಗೆ ಸನ್ಮಾನ
ಕುಮಟಾ: ಉತ್ತರ ಕನ್ನಡ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ವಿಡಂಬಾರಿ ಅವರ ಕಡತೋಕಾ ನಿವಾಸಕ್ಕೆ ತೆರಳಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮತ್ತು ಉನ್ನತ ಮಟ್ಟದ ಸಲಹಾ ಸಮಿತಿ ಪದಾಧಿಕಾರಿಗಳು ವಿಡಂಬಾರಿ ಅವರನ್ನು ಸನ್ಮಾನಿಸಿ, ಅಧಿಕೃತ ಒಪ್ಪಿಗೆಪತ್ರ ಪಡೆದು ಗೌರವಿಸಿದರು.