-ದಿನೇಶ್ ಹೆಗಡೆ
ಕನ್ನಡಪ್ರಭ ವಾರ್ತೆ, ಹೊನ್ನಾವರ, ಫೆ. 6
ಸನಾತನಿಗಳ ಪಾಲಿನ ದೇವ, ಮರ್ಯಾದಾ ಪುರುಷೋತ್ತಮ, ಸಾಕ್ಷಾತ್ ಶ್ರೀರಾಮಚಂದ್ರನ ಶರಾಘತದಿಂದ ಉದ್ಭವಿಸುವ ಜಲಧಾರೆ. ನಾಡಿನ ಐತಿಹಾಸಿಕ ಸ್ಮಾರಕಗಳಲ್ಲೊಂದಾಗಿರುವ ಪವಿತ್ರ ರಾಮತೀರ್ಥದಲ್ಲಿ ಇದೀಗ ತರ್ಪಣಕ್ಕೂ ಜಲಕ್ಷಾಮ ಬಂದೀತೆ ಎಂಬ ಆತಂಕ ಎದುರಾಗಿದೆ.
ಹೊನ್ನಾವರ ಪಟ್ಟಣ ಸಮೀಪ ಅರೇಅಂಗಡಿ ತೆರಳುವ ಮಾರ್ಗದಾರಂಭದಲ್ಲೇ ಕಡುಗಪ್ಪು ಕಲ್ಲು ಬಂಡೆಗಳ ಗುಡ್ಡದ ಒಡಲಿನ ನಡುವೆ ಇರುವ ಶ್ರೀರಾಮತೀರ್ಥ ಕ್ಷೇತ್ರ ಸರ್ವಋತುಗಳ ಕಾಲ ನೈಸರ್ಗಿಕವಾಗಿ ಝರಿ ಝರಿಯಾಗಿ ಬೀಳುವ ಜಲಧಾರೆಗಳಿಂದ ಪ್ರಸಿದ್ಧಿ ಪಡೆದಿದೆ.
ಜಳಕ ಮಾಡಿದರೆ ಮಾನಸಿಕ ನೆಮ್ಮದಿ: ಶ್ರೀರಾಮ, ಸಹೋದರ ಲಕ್ಷ್ಮಣನ ಸಹಿತ ವನವಾಸ ಸಂದರ್ಭದಲ್ಲಿ ಪ್ರಯಾಣಿಸುವಾಗ ಉಂಟಾದ ಬಾಯಾರಿಕೆಯನ್ನು ತಣಿಸಿಕೊಳ್ಳಲು ಸುತ್ತ ನೀರಿನ ನೆಲೆ ಕಾಣದೇ ನೀರಿಗಾಗಿ ಅಭಿಮಂತ್ರಿಸಿ ಬಿಟ್ಟ ಶರಾಘಾತದಿಂದ ಚಿಮ್ಮಿದ ಜಲಧಾರೆಗಳೇ ಮುಂದೆ ಪವಿತ್ರಿ ರಾಮತೀರ್ಥ ಮತ್ತು ಲಕ್ಷ್ಮಣ ತೀರ್ಥಗಳಾದವು. ಇಲ್ಲಿರುವ ಶ್ರೀರಾಮೇಶ್ವರ ದೇವಾಲಯವೂ ಸಹ ಶ್ರೀರಾಮನಿಂದಲೇ ಸ್ಥಾಪಿತವಾಗಿ, ಪೂಜಿತವಾದುದು ಎಂಬುದು ಸ್ಥಳದ ಇತಿಹಾಸ.
ಭಗವಾನ್ ಶ್ರೀಧರ ಸ್ವಾಮಿಗಳವರು ಇಲ್ಲಿನ ದೈವಿಕ ಸಂಪನ್ನತೆಯನ್ನು ಮನಗಂಡು ಪವಿತ್ರ ಔದಂಬರ ಗಿಡ ನೆಟ್ಟು ತಪಸ್ಸನ್ನಾಚರಿಸಿದ್ದಲ್ಲದೇ, ದತ್ತಾತ್ರೆಯ ಮೂರ್ತಿ ಸ್ಥಾಪಿಸಿ ಪೂಜಿಸಿದ್ದರು. ಈ ಎಲ್ಲ ಐತಿಹಾಸಿಕ ಹಿನ್ನೆಲೆಯಲ್ಲಿ ಎಂದೂ ಬತ್ತದ ಈ ಜಲಧಾರೆಗಳಿಗೆ ತಲೆಯೊಡ್ಡಿ ಜಳಕ ಮಾಡಿದರೆ ಮಾನಸಿಕ ಕಾಯಿಲೆ, ಚರ್ಮ ವ್ಯಾಧಿಗಳು ಗುಣಮುಖವಾಗುವವು ಎಂಬ ನಂಬಿಕೆಗಳಡಿ ನಿತ್ಯ ವಿವಿಧ ಭಾಗಗಳಿಂದ ಪ್ರವಾಸಿಗರು ಭೇಟಿ ನೀಡಿ ಮನಃಶಾಂತಿ ಕಂಡುಕೊಂಡಿದ್ದರು.
ಮಹತ್ವ ಕಳೆದುಕೊಳ್ಳುವ ಭೀತಿ: ಭೂ ದಲ್ಲಾಳಿಗಳು ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡು ಈ ತೀರ್ಥದ ಸೆಲೆಯನ್ನೇ ಕೊರೆದು ನೀರೆತ್ತುವ ಸಾಹಸಕ್ಕಿಳಿದಿರುವುದು ಪವಿತ್ರ ರಾಮತೀರ್ಥದ ಜಲಧಾರೆಗಳು ಬತ್ತಲು ಕಾರಣ ಎಂಬ ಅಭಿಪ್ರಾಯ ದಟ್ಟವಾಗಿದೆ. ಅರಣ್ಯ ಇಲಾಖೆಯಿಂದ ಶ್ರೀರಾಮತೀರ್ಥ ಕ್ಷೇತ್ರದ ಪರಿಸರದಲ್ಲಿ ನೈಸರ್ಗಿಕ ಕೊಡುಗೆಯನ್ನು ಉಳಿಸಿಕೊಳ್ಳುವ ಹಾಗೂ ಇಡೀ ಕ್ಷೇತ್ರಕ್ಕೆ ಒಂದು ಮೆರಗು ನೀಡುವ ನಿಟ್ಟಿನಲ್ಲಿ ರು. ಕೋಟ್ಯಂತರ ವೆಚ್ಚದಲ್ಲಿ ನಕ್ಷತ್ರವನ, ವನೀಕರಣ ಯೋಜನೆಗಳನ್ನು ಹಾಕಿಕೊಂಡು ಸಾವಿರಾರು ಬಹುಪಯೋಗಿ ಸಸ್ಯ ಪ್ರಭೇದಗಳನ್ನು ಬೆಳೆಸುತ್ತಿದ್ದರೂ ರಾಮತೀರ್ಥದ ಜಲಧಾರೆಗಳು ಬತ್ತಿದಲ್ಲಿ ಶ್ರೀರಾಮತೀರ್ಥ ತನ್ನ ಐತಿಹಾಸಿಕ ಮಹತ್ವ ಕಳೆದುಕೊಂಡಂತಾಗುತ್ತದೆ. ರಾಮತೀರ್ಥ ಕ್ಷೇತ್ರದ ಸಂರಕ್ಷಿತ ವ್ಯಾಪ್ತಿಯಲ್ಲಿ ಉದ್ಯಮಿಗಳೊಬ್ಬರು ಉದ್ದಿಮೆ ವಹಿವಾಟಿನ ಕೇಂದ್ರವೊಂದನ್ನು ತೆರೆಯಲು ಭೂಮಿ ಖರೀದಿಗೆ ಮಾತುಕತೆಗೆ ಮುಂದಾಗಿರುವುದು ತಿಳಿದು ಬಂದಿದೆ. ಐತಿಹಾಸಿಕ ಸ್ಮಾರಕ, ತಾಣಗಳ ರಕ್ಷಣೆಗಾಗೇ ಇರುವ ಇಲಾಖಾಧಿಕಾರಿಗಳಿನ್ನೂ ಕುಂಭಕರ್ಣ ನಿದ್ದೆಯಲ್ಲೇ ಇರುವರೆ? ಐತಿಹಾಸಿಕ ತಾಣದ ನಿರ್ದಿಷ್ಟ ವ್ಯಾಪ್ತಿಯೊಳಗೆ ವಸತಿ, ಸಮುಚ್ಚಯ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳೀಯ ಪಂಚಾಯತಿಗಳು ನಿರಾಳವಾಗಿ ಪರವಾನಿಗೆ ನೀಡಲು ಬಳಸಿದ ಮಾನದಂಡಗಳೇನು ಎಂದು ಜನ ಪ್ರಶ್ನಿಸತೊಡಗಿದ್ದಾರೆ.