ನಾಳೆಯಿಂದ ಯತಿವರ್ಯರ ಪಟ್ಟಾಭಿಷೇಕ ಮಹೋತ್ಸವ

ಸ್ವಾದಿ ಜೈನ ದಿಗಂಬರ ಮಠ ನವ ವಧು-ವರರ ರೀತಿಯಲ್ಲಿ ಶೃಂಗಾರಗೊಳ್ಳುತ್ತಿದೆ...
Updated on: 

ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 9
ಸಹ್ಯಾದ್ರಿಯ ಹಸಿರಿನ ಸಿರಿಯ ನಡುವೆ ಕಂಗೊಳಿಸುತ್ತಿರುವ ತಾಲೂಕಿನ ಸ್ವಾದಿ ಜೈನ ದಿಗಂಬರ ಮಠ ನವ ವಧು-ವರರ ರೀತಿಯಲ್ಲಿ ಶೃಂಗಾರಗೊಳ್ಳುತ್ತಿದೆ. ಭಕ್ತರ ಸಂಭ್ರಮಕ್ಕೆ ಸ್ವಾದಿಯ ಮಠವೇ ಸಾಕ್ಷಿಯಾಗಿದೆ. ಅಹೋರಾತ್ರಿ ಕಾರ್ಯಕ್ರಮದ ಪೂರ್ವ ತಯಾರಿ ನಡೆಯುತ್ತಿದೆ.
ಸ್ವಾದಿ ದಿಗಂಬರ ಜೈನ ಮಠದ ನೂತನ ಸ್ವಾಮೀಜಿ ಮಾಣಿಕ್ಯ ಕೀರ್ತಿ ಸ್ವಾಮೀಜಿ ಪಟ್ಟಾಭಿಷೇಕಕ್ಕಾಗಿ ಮಠದ ಸುತ್ತಮುತ್ತ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮಾಣಿಕ್ಯ ಕೀರ್ತಿ ಸ್ವಾಮೀಜಿಗಳ ಆಗಮನಕ್ಕಾಗಿ ಎದುರು ನೋಡಲಾಗುತ್ತಿದೆ. ನೂತನ ಯತಿವರ್ಯರ ಪಟ್ಟಾಭಿಷೇಕ ಮಹೋತ್ಸವಕ್ಕಾಗಿ ಫೆ. 11ರಿಂದ 13ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾದಿ ಜೈನ ಮಠದ ಹಳೆಯ ಕಟ್ಟಡವನ್ನು ನವೀಕರಿಸಲಾಗಿದೆ. ಮಠದ ಆವರಣದಲ್ಲಿದ್ದ ತೆಂಗಿನ ತೋಟವನ್ನು ಸಮತಟ್ಟು ಮಾಡಿ ಆ ಜಾಗದಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಭಕ್ತಾದಿಗಳ ಆಗಮನಕ್ಕಾಗಿ ವಿಶೇಷ ಬಸ್ಸಿನ ವ್ಯವಸ್ಥೆ ಏರ್ಪಡಿಸಲಾಗಿದೆ. ಖಾಸಗಿ ವಾಹನಗಳು ಕೂಡ ಭಕ್ತರನ್ನು ಹೊತ್ತೊಯ್ಯಲಿವೆ. ಭಕ್ತರ ಅನುಕೂಲಕ್ಕಾಗಿ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಿರಸಿ ನಗರದಲ್ಲಿರುವ ಪ್ರಮುಖ ವಸತಿಗೃಹಗಳಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಲ್ಲಿರುವ ಎಲ್ಲ ಯಾತ್ರಿ ನಿವಾಸಗಳನ್ನು ಕಾದಿರಿಸಲಾಗಿದೆ.
ರು. 50 ಲಕ್ಷ ಅಂದಾಜು ವೆಚ್ಚ: ತಮಿಳುನಾಡಿನ ಭಟ್ಟಾರಕ ಧವಲಕೀರ್ತಿ ಸ್ವಾಮೀಜಿಗಳು ಈಗಾಗಲೇ ಮಠಕ್ಕೆ ಆಗಮಿಸಿದ್ದು, ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿ ತಯಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹೊಂಬುಜ ಕ್ಷೇತ್ರ, ಬೆಂಗಳೂರು, ಕಲಘಟಗಿ, ಧಾರವಾಡ-ಹುಬ್ಬಳ್ಳಿ ಮುಂತಾದ ಪ್ರದೇಶಗಳಿಂದ ಆಗಮಿಸಿದ ಸ್ವಯಂಸೇವಕರು ಸಿದ್ಧತೆಗಾಗಿ ದುಡಿಯುತ್ತಿದ್ದಾರೆ. ಈ ಸ್ವಯಂ ಸೇವಕರು ಪಟ್ಟಾಭಿಷೇಕ ಪೂರ್ವದಲ್ಲಿ ಮಾಡಬೇಕಾಗಿರುವ ಅಗತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.  ಭೋಜನಕ್ಕಾಗಿ ಸನಿಹದಲ್ಲೇ ವಿಶಾಲವಾದ ಜಾಗದಲ್ಲಿ ಚಪ್ಪರ ಚಾವಡಿಗಳನ್ನು ಹಾಕಲಾಗುತ್ತಿದೆ. ಈಗಾಗಲೇ ಹೊರ ಪ್ರದೇಶಗಳ ಭಕ್ತರು ಅಕ್ಕಿ, ದವಸಧಾನ್ಯ, ಬೆಲ್ಲ, ಸಕ್ಕರೆಗಳೊಂದಿಗೆ ಆಗಮಿಸುತ್ತಿದ್ದಾರೆ. ವ್ಯವಸ್ಥೆಗಳನ್ನು ಮಾಡುವುದಕ್ಕಾಗಿ ಹುಬ್ಬಳ್ಳಿ, ಹಾವೇರಿ ಭಾಗಗಳಿಂದ ಕಾರ್ಮಿಕರನ್ನು ಕರೆತರಲಾಗಿದ್ದು, ನೀರು, ವೇದಿಕೆ, ಸಭಾಂಗಣ ಕೆಲಸಗಳಲ್ಲಿ ತೊಡಗಿಸಲಾಗಿದೆ. ಈ ಮಹೋತ್ಸವಕ್ಕಾಗಿ ರು. 50 ಲಕ್ಷ ಅಂದಾಜು ವೆಚ್ಚವಾಗುವ ನಿರೀಕ್ಷೆಯಿದೆ ಎಂದು ಮಠದ ಉಸ್ತುವಾರಿಗಳು ಹೇಳುತ್ತಾರೆ.
ಎಲ್ಲ ಭಾಗಗಳಲ್ಲಿ ಶಿಷ್ಯರು: ಸ್ವಾದಿ ದಿಗಂಬರ ಜೈನ ಮಠದ ಅಡಿಯಲ್ಲಿ ಸಿದ್ದಾಪುರದ ಬಿಳಗಿ, ಶಿರಳಗಿ, ಗೇರುಸೊಪ್ಪಾ, ಭಟ್ಕಳ, ಹಾಡುವಳ್ಳಿ, ಹಳಿಯಾಳ ಮತ್ತು ಹವಗಿ, ಕಲಘಟಗಿ, ಅಂಕೋಲಾ, ಕುಮಟಾ, ಹಳದಿಪುರ, ಮಂಕಿ, ದೇವನಳ್ಳಿ, ಬನವಾಸಿ, ಶಿರಸಿ, ಅಟಬೈಲ್, ಯಲ್ಲಾಪುರ, ಸಾಗರ ತಾಲೂಕಿನ 14 ಬಸದಿಗಳು, ಅಕ್ಕಿ ಆಲೂರು, ಹಾವೇರಿ, ಬಾಳಂಬೀಡು, ಕನಕಾದ್ರಿ, ಲಕ್ಷ್ಮೇಶ್ವರ ಇವುಗಳಲ್ಲದೇ, ದೆಹಲಿ ಹಾಗೂ ಉತ್ತರಭಾರತದ ಅನೇಕ ಸ್ಥಳಗಳಲ್ಲಿ ಮಠದ ಶಿಷ್ಯರಿದ್ದಾರೆ. ಈ ಎಲ್ಲ ಪ್ರದೇಶಗಳಿಂದ ಮಠದ ಶಿಷ್ಯರು ಆಗಮಿಸಲಿದ್ದು, ಇನ್ನುಳಿದ ಹಲವಾರು ಸ್ಥಳಗಳಿಂದಲೂ ಭಕ್ತಾದಿಗಳ ನಿರೀಕ್ಷೆ ಮಾಡಲಾಗುತ್ತಿದೆ. ಸ್ವಾದಿ ಮಠದಲ್ಲಿ ಕೂಷ್ಮಾಂಡಿನಿ ದೇವಿ, ನೇಮಿನಾಥ ತೀರ್ಥಂಕರರು ಹಾಗೂ ಆದಿನಾಥ ತೀರ್ಥಂಕರರ ಪೂಜೆಯನ್ನು ದಿನಂಪ್ರತಿ ಮಾಡಲಾಗುತ್ತಿದೆ.
   ವಿಶೇಷ ಸಂದರ್ಭಗಳಲ್ಲಿ ಶ್ರೀಮಠದ ಬಸದಿಯಲ್ಲಿ 1008 ನೇಮಿನಾಥ ತೀರ್ಥಂಕರರಿಗೆ ನವಕಲಶಾಭಿಷೇಕ ಪೂಜೆ, ಗಣಧರವಲಯ ಯಂತ್ರಾರಾಧನೆ, ವಿಜಯದಶಮಿ ಉತ್ಸವ, 24 ತೀರ್ಥಂಕರರ ಆರಾಧನೆ, ದಶದಿಕ್ಪಾಲಕರ ಪೂಜೆ, ಕ್ಷೇತ್ರಪಾಲ ಪೂಜೆ, ಶೋಡಷೋಪಚಾರ ಪೂಜೆ, ಮಹಾಮಂಗಳಾರತಿ ಈ ಮುಂತಾದ ಪೂಜಾ ಕೈಂಕರ್ಯಗಳು ನಡೆಯುತ್ತವೆ.
- ವಿಶ್ವಾಮಿತ್ರ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com