ದಾಂಡೇಲಿ: ದಾಂಡೇಲಿ ನಗರದಲ್ಲಿ ಎರಡು ದಿನಗಳ ಕಾಲ ಕಾಳಿ ಉತ್ಸವ ಕಾರ್ಯಕ್ರಮ ಆರಭಗೊಂಡಿದೆ.
ಹಳಿಯಾಳ-ಜೋಯಿಡಾ-ದಾಂಡೇಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರ ಹಿತವನ್ನು ಬಯಸುತ್ತ ಅವರಲ್ಲಿ ಹುದುಗಿರುವ ವಿವಿಧ ಕಲೆ, ಸಾಹಿತ್ಯ, ಸಂಗೀತವನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದೆ.
ಕಾರ್ಯಕ್ರಮದ ಆರಂಭದಲ್ಲಿ ಕಾಳಿ ಉತ್ಸವ ಜ್ಯೋತಿಯನ್ನು ಹಳೆ ದಾಂಡೇಲಿ ಗಾಂಧಿ ಚೌಕ್ನಿಂದ ನಗರದ ಹಳೆ ನಗರಸಭೆ ಮೈದಾನಕ್ಕೆ ತರಲಾಯಿತು. ಜ್ಯೋತಿ ಮೆರವಣಿಗೆಯಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು. ನಗರದ ಜಾಮಿಯಾ ಮಸ್ಜಿದ್, ಹಳೆ ದಾಂಡೇಲಿ ಚರ್ಚ್, ಪಟೇಲ್ ಸರ್ಕಲ್ ಜೆ.ಎನ್.ರಸ್ತೆ, ಬಸ್ ನಿಲ್ದಾಣ ಸೋಮಾನಿ ವೃತ್ತದ ಮೂಲಕ ಹಾದು ನಗರದ ಹಳೆ ನಗರಸಭೆಯ ಮೈದಾನಕ್ಕೆ ತರಲಾಯಿತು. ಕಾಳಿ ಉತ್ಸವ ಜ್ಯೋತಿಯನ್ನು ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಅವರು ಸ್ವಾಗತಿಸಿ, ಜ್ಯೋತಿಯನ್ನು ಪ್ರಜ್ವಲಿಸಿ ಶುಭ ಹಾರೈಸಿ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಉದ್ಘಾಟನಾ ಆಟವಾಗಿ ಹಿರಿಯ ನಾಗರಿಕರಿಗೆ ವೇಗದ ನಡಿಗೆ ಕಾರ್ಯಕ್ರಮ ನಡೆಯಿತು. ಮಹಿಳೆಯರ ರಂಗೋಲಿ ಸ್ಪರ್ಧೆ, ಕಿಚನ್ ಕ್ವೀನ್ ಹಮ್ಮಿಕೊಳ್ಳಲಾಯಿತು. ಮಕ್ಕಳಿಗಾಗಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕ್ವಿಜ್ ಕಾಂಪಿಟೇಶನ್ ದಿನದ ಆಕರ್ಷಣೆಯಾಗಿದ್ದವು. ಇಂದು, ನಾಳೆ ನಡೆಯುವ ಪ್ರತಿಯೊಂದು ಸ್ಪರ್ಧೆಗಳಲ್ಲಿ ವಿಜೇತ ಮೂರು ಬಹುಮಾನಗಳನ್ನು ವಿ.ಆರ್. ದೇಶಪಾಂಡೆ ಮೆಮೋರಿಯಲ್ ಸಂಸ್ಥೆಯವರು ನೀಡಲಿದ್ದಾರೆ.