ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 11
ರೈತರ ಮತ್ತು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸುಮಾರು ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿ, ರೈತರ ಬೇಡಿಕೆಗಳನ್ನು ಆಗ್ರಹಿಸುವಂತೆ ಘೋಷಣೆಗಳನ್ನು ಕೂಗಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅಸಂಖ್ಯಾತ ಚಿಲ್ಲರೆ ಮಾರಾಟಗಾರರ ಬದುಕಿಗೆ ಕೊಡಲಿ ಏಟು ನೀಡಿದಂತಾಗಿದೆ. ಕೇಂದ್ರ ಸರ್ಕಾರ ಕೂಡಲೇ ಇದನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಕೇಂದ್ರದ ಯುಪಿಎ ಸರ್ಕಾರ ದೇಶದ ಬೆನ್ನುಲುಬಾದ ರೈತರ ನಿಜವಾದ ಸಮಸ್ಯೆ ಅರಿತು ಸಂಪೂರ್ಣ ಸಾಲ ಮನ್ನಾದಂತಹ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ತೀವ್ರ ಚರ್ಚೆಗೆ ಗ್ರಾಸವಾದ ವಿಶೇಷ ಆರ್ಥಿಕ ವಲಯದ ದುಷ್ಪರಿಣಾಮಗಳನ್ನು ಮನಗಂಡು ಅದರ ಬದಲು ವಿಶೇಷ ಕೃಷಿ ವಲಯ ಎಂದು ಘೋಷಣೆ ಮಾಡಿ, ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕ್ರಮ ಕೈಗೊಳ್ಳಿ: ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರಮುಖ ಆಹಾರ ಬೆಳೆಯಾದ ಬತ್ತಕ್ಕೆ ಸರಿಯಾದ ಮಾರುಕಟ್ಟೆ ಹಾಗೂ ಧಾರಣೆ ಇಲ್ಲದಂತಾಗಿದೆ. ಹಾಗಂತ ಗ್ರಾಹಕರಿಗೂ ಯೋಗ್ಯ ರೀತಿಯಲ್ಲಿ ದೊರೆಯುತ್ತಿಲ್ಲ. ಸರ್ಕಾರ ಕೂಡಲೇ ಬತ್ತಕ್ಕೆ ಬೆಂಬಲ ಬೆಲೆಯನ್ನು ಸಮರ್ಪಕ ರೀತಿಯಲ್ಲಿ ನೀಡುವಂತಾಗಬೇಕು ಎಂದು ಆಗ್ರಹಿಸಿದರು. ಹಿಂದೆ ಸೆ. 14ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆ ಈಡೇರಿಕೆಗೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಭಾಸ್ಕರ ಹೆಗಡೆ ಹಿರೇಸರ, ರೈತರ ಬದಕು ಇಂದು ಕಷ್ಟಕರ ಸ್ಥಿತಿಯಲ್ಲಿದೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರಕುತ್ತಿಲ್ಲ. ಬೆಳೆ ಬೆಳೆಯಲು ಮಾಡಿದ ಸಾಲವನ್ನು ತೀರಿಸಲು ಕಷ್ಟಕರವಾಗಿದೆ. ಕೃಷಿ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ಮುಂದಾಗಬೇಕು. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಶಿವರಾಮ ಗಾಂವಕರ ಮಾತನಾಡಿ, ಕೃಷಿ ಕ್ಷೇತ್ರ ಇಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಿ, ರೈತರ ನೆರವಿಗೆ ನಿಲ್ಲಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ರೈತರ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಿಸಾನ್ ಸಂಘದ ಹೊನ್ನಾವರ ತಾಲೂಕು ಘಟಕದ ಅಧ್ಯಕ್ಷ ಎಂ.ಆರ್. ಹೆಗಡೆ, ಭಟ್ಕಳ ತಾಲೂಕು ಅಧ್ಯಕ್ಷ ಈಶ್ವರ ನಾಯ್ಕ ದೊಡ್ಮನೆ, ಯಲ್ಲಾಪುರ ತಾಲೂಕು ಅಧ್ಯಕ್ಷ ನರಸಿಂಹ ಸಾತೊಡ್ಡಿ, ನರಸಿಂಹಮೂರ್ತಿ ಅಶೀಸರ, ರಾಮಾ ಕೆ. ನಾಯ್ಕ, ಗೋಪಾಲಕೃಷ್ಣ ಬಾಳೆಗದ್ದೆ, ಲಕ್ಷ್ಮೀನಾರಾಯಣ ಹೆಗಡೆ ಮತ್ತಿತರರು ಇದ್ದರು.