ನೀರಿಗೆ ಮೀಟರ್ ಕಡ್ಡಾಯವಾಗಲಿ

Updated on: 

ಕನ್ನಡಪ್ರಭ ವಾರ್ತೆ, ಕಾರವಾರ, ಫೆ.12
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಮೂರನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ. ಕೊಡ್ಗಿ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅನುಷ್ಠಾನಾಧಿಕಾರಿಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿಗೆ ಮೀಟರ್ ಅಳವಡಿಸದ ಕಾರಣ ನೀರಿನ ಸಮರ್ಪಕ ಹಂಚಿಕೆ ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿರುವ ಶ್ರೀಮಂತರು ಹೆಚ್ಚಿನ ನೀರನ್ನು ಸಂಗ್ರಹಿಸುವ ಮೂಲಕ ಸಾಮಾನ್ಯರಿಗೆ ನೀರು ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಮೀಟರ್ ಅಳವಡಿಸುವ ಮೂಲಕ ನೀರಿನ ಸಮರ್ಪಕ ನಿರ್ವಹಣೆ ಸಾಧ್ಯವಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮೂಲಸೌಕರ್ಯಗಳನ್ನು ಉತ್ತಮ ಪಡಿಸುವ ಅಗತ್ಯವಿದೆ. ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಎಲ್ಲ ಇಲಾಖೆಗಳಿಗೆ ಸಿಬ್ಬಂದಿ ಅಗತ್ಯವಾಗಿದೆ. ಅನುದಾನ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಬಹುತೇಕ ಇಲಾಖೆಗಳಲ್ಲಿ ಅಗತ್ಯ ಸಿಬ್ಬಂದಿ ತೀವ್ರ ಕೊರತೆಯಿದ್ದು, ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಕಷ್ಟವಾಗಿರುವುದು ಕಾರ್ಯಪಡೆ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಬಹುಬೇಗ ಹಾಳಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಪ್ಯಾಕೇಜ್ ಸಿದ್ಧಪಡಿಸಬಹುದಾಗಿದೆ. ಅದಕ್ಕಿಂತಲೂ ರಸ್ತೆ ಪಕ್ಕದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಉತ್ತಮ ಚರಂಡಿಯನ್ನು ನಿರ್ಮಿಸಿದರೆ, ರಸ್ತೆ ಬೇಗ ಹಾಳಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು.
ರೈತ ಸಂಪರ್ಕ ಕೇಂದ್ರಗಳಿಗೆ ಕಟ್ಟಡ: ಜಿಲ್ಲೆಯಲ್ಲಿ 35 ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡ ಇರುವುದಿಲ್ಲ. ಹೊಸ ಕಟ್ಟಡ ನಿರ್ಮಿಸಲು ಸೂಕ್ತ ನಿವೇಶನವನ್ನು ಗುರುತಿಸುವ ಕಾರ್ಯ ನಡೆಯಬೇಕು. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಈ ನಿಟ್ಟಿನಲ್ಲಿ ತ್ವರಿತವಾಗಿ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು. ವಿವಿಧ ಯೋಜನೆಗಳ ಅಡಿಯಲ್ಲಿ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ ನಿರೀಕ್ಷಿತ ವೇಗದಲ್ಲಿ ನಡೆಯಬೇಕು. ನಿವೇಶನದ ಕೊರತೆಯಿಂದ ಯೋಜನೆಯಲ್ಲಿ ಗುರಿ ಸಾಧಿಸಲು ಕಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ಕೆಲವು ಕಡೆಗಳಲ್ಲಿ ಕಂದಾಯ ಜಮೀನು ಮತ್ತು ಅರಣ್ಯ ಜಮೀನು ಕುರಿತಾಗಿ ಗೊಂದಲ ಇರುವುದು ಗಮನಕ್ಕೆ ಬಂದಿದೆ. ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಮಲೆನಾಡು ಭಾಗದಲ್ಲಿ ಕಾಲು ಸೇತುವೆಗಳ ನಿರ್ಮಾಣಕ್ಕಾಗಿ ರು. 10 ಕೋಟಿಗಳನ್ನು ಸರ್ಕಾರ ಬಿಡುಗಡೆ ಮಾಡಲಿದ್ದು, ಇದರ ಅನುಷ್ಠಾನಕ್ಕೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದರು. ಸದಸ್ಯರಾದ ವಿಠ್ಠಲ ದೈಮನೆ, ಉಮೇಶ ನಾಯಕ್, ಕಾರ್ಯದರ್ಶಿ ನಾರಾಯಣ, ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸುಬ್ರಾಯ ಕಾಮತ್, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com