17ರಿಂದ ಉಳವಿ ಜಾತ್ರೆ

Updated on: 

ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 14
ಜೋಯಿಡಾದ ಶ್ರೀಕ್ಷೇತ್ರ ಉಳವಿ ಚನ್ನ ಬಸವೇಶ್ವರ ಜಾತ್ರಾ ಮಹೋತ್ಸವವು ಫೆ. 17ರಿಂದ 27ರ ತನಕ ನಡೆಯಲಿದೆ ಎಂದು ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಸಂಜಯ ಕಿತ್ತೂರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಫೆ. 17ರ ಬೆಳಗ್ಗೆ ಷಟ್‌ಸ್ಥಳ ಧ್ವಜಾರೋಹಣ, ರಥ ಪೂಜೆ, ಸೀಮೆ ಕಟ್ಟುವುದು. 18ರ ರಾತ್ರಿ ಮಹಾರುದ್ರ ಪಲ್ಲಕ್ಕಿ ಉತ್ಸವ, 19ರ ರಾತ್ರಿ 8ಕ್ಕೆ ಭೂಮಿಪೂಜೆ, ನವಧಾನ್ಯ ಹಾಕುವುದು. 20ರ ರಾತ್ರಿ 8ಕ್ಕೆ ರಕ್ಷಾದೇವಿ ಪೂಜೆ ಹಾಗೂ ರಥೋತ್ಸವ ನಡೆಯಲಿದೆ. 21ರ ರಾತ್ರಿ ವೀರಭದ್ರ ದೇವರ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ. 22ರಂದು ಬಸವಣ್ಣನ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ. 23ರ ರಾತ್ರಿ 8ಗಂಟೆಗೆ ಎಲ್ಲ ದೇವತೆಗಳ ರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಶಸ್ತಿ ಪ್ರದಾನ: 24ರ ಮಧ್ಯಾಹ್ನ 12.30ಕ್ಕೆ ಚನ್ನ ಬಸವೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಚನ್ನ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮತ್ತು ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಅಂದು ದೇವಸ್ಥಾನ ಕಮಿಟಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದೇವಸ್ಥಾನ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ ಅಧ್ಯಕ್ಷತೆ ವಹಿಸುವರು. ನಂತರ ದಿ. ಸುಶೀಲಮ್ಮ ಬಿ.ಎಸ್ ಚನ್ನಬಸಪ್ಪ ದಾವಣಗೆರೆ ಇವರ ಸ್ಮರಣಾರ್ಥ ವಸತಿಗೃಹ ಅಡಿಗಲ್ಲು ಸಮಾರಂಭ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ನೆರವೇರಲಿದೆ. ಬಸವೇಶ್ವರ ಭವನ ಅಡಿಗಲ್ಲು ಸಮಾರಂಭ ಶ್ಯಾಮನೂರು ಶಿವಶಂಕರಪ್ಪ ಅವರಿಂದ ಉದ್ಘಾಟನೆ, ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯಿಂದ ಸಂಜಯ ಕಿತ್ತೂರ ಕಲ್ಯಾಣ ಮಂಟಪದ ಉದ್ಘಾಟನೆ, ದಿ. ರಾವ್ ಸಾಹೇಬ್ ಅಡಿವೆಪ್ಪ ಚನ್ನಪ್ಪ ಕಿತ್ತೂರ ವಸತಿಗೃಹ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪಾಲ್ಗೊಳ್ಳುವರು. ಮಧ್ಯಾಹ್ನ 1ಕ್ಕೆ ಯಾತ್ರಿ ನಿವಾಸ ಅಡಿಗಲ್ಲು ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದು, ಶಾಸಕ ಸುನೀಲ್ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 8ಕ್ಕೆ ಚನ್ನ ಬಸವೇಶ್ವರ ರಥಾರೋಹಣ ಮತ್ತು ಕಾಣಿಕೆ ಪ್ರಾರಂಭ ಉತ್ಸವ ಜರುಗಲಿದೆ ಎಂದು ತಿಳಿಸಿದರು.
ಜಾತ್ರಾ ಸಮಾರೋಪ: 25ರ ಸಂಜೆ 4ಕ್ಕೆ ಮಹಾ ರಥೋತ್ಸವ ಜರುಗಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವರು. ಗೌರವ ಅತಿಥಿಗಳಾಗಿ ಸಂಸದ ಅನಂತ ಕುಮಾರ ಹೆಗಡೆ, ಶಾಸಕ ಸುನೀಲ್ ಹೆಗಡೆ, ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ, ಎಸ್.ಎಲ್. ಘೋಟ್ನೇಕರ್, ಮಾಜಿ ಸಚಿವರಾದ ಸಿ.ಎಂ. ಉದಾಸಿ, ಆರ್.ವಿ. ದೇಶಪಾಂಡೆ, ಉಕ ಜಿಪಂ ಅಧ್ಯಕ್ಷ ಕೃಷ್ಣಾ ಗೌಡ ಭಾಗವಹಿಸುವರು. 26ರ ಮಧ್ಯಾಹ್ನ 4ಕ್ಕೆ ಬಯಲುಗಣ ಕುಸ್ತಿ ಸ್ಪರ್ಧೆ, 27ರ ರಾತ್ರಿ 7ಕ್ಕೆ ಓಕುಳಿ, ಜಾತ್ರಾ ಸಮಾರೋಪ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಾತ್ರಾ ಮಹೋತ್ಸವದಂದು ಅಂಗಡಿ ಹಾಕುವವರು ಫೆ. 18ರಂದು ದೇವಸ್ಥಾನ ಟ್ರಸ್ಟ್ ಬಳಿ ಬಂದು ನಿಗದಿತ ಶುಲ್ಕ ಪಾವತಿಸಿ ಸ್ಥಳ ಆಯ್ಕೆ ಮಾಡಬೇಕು. ಉಳವಿ ಚನ್ನಬಸವೇಶ್ವರ ಕ್ಷೇತ್ರದ ಅಭಿವೃದ್ಧಿಗಾಗಿ ರು. 2 ಕೋಟಿ ಹಣ ಮಂಜೂರಿಯಾಗಿದ್ದು, ಅದರಲ್ಲಿ ರು. 1 ಕೋಟಿ ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಇನ್ನುಳಿದ ರು. 1 ಕೋಟಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಈಗಾಗಲೇ ವಿವಿಧ ದಾನಿಗಳಿಂದ ಸಹಾಯ ಪಡೆದು ರು. 6 ಕೋಟಿಗಳನ್ನು ಶ್ರೀಕ್ಷೇತ್ರದ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಕೆಲವು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲು ಮುಜುರಾಯಿ ಇಲಾಖೆಗೆ ಮನವಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ, ಸದಸ್ಯ ಬಿ.ಎಸ್. ಬಿಕ್ಕಣ್ಣವರ್, ಕಾರವಾರ ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com