ಜೋಯಿಡಾ: ಬಜೆಟ್ನಲ್ಲಿ ಜೋಯಿಡಾ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ರೈತ ಪ್ರಾಂತ ಸಂಘ ತೀವ್ರವಾಗಿ ಖಂಡಿಸಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ರೈತ ಪ್ರಾಂತ ಸಂಘದ ಜೋಯಿಡಾ ಘಟಕದ ಆಗ್ರಹಕ್ಕೆ ಒಪ್ಪಿಗೆ ನೀಡಿ ಆಶ್ವಾಸನೆ ನೀಡಿದ ಬಿಜೆಪಿ ಸರ್ಕಾರ ಇಂದು ಬಜೆಟ್ನಲ್ಲಿ ನಿರ್ಲಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿದ ಸಂಘದ ಅಧ್ಯಕ್ಷ ನಾರಾಯಣ ವೇಳಿಪ, 10 ವರ್ಷಗಳಿಂದ ಜೋಯಿಡಾ ತಾಲೂಕಿನ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಅನೇಕ ಬಾರಿ ಹೋರಾಟ, ಚಳವಳಿ, ಪಾದಯಾತ್ರೆ, ಧರಣಿ ಸತ್ಯಾಗ್ರಹ ಮಾಡಿಕೊಂಡು ಬಂದಿದ್ದೇವೆ. ಸರ್ಕಾರಕ್ಕೆ ಈ ಬಗ್ಗೆ ಮನವಿ ನೀಡಿದ್ದರೂ ಸರ್ಕಾರ ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ತಾಲೂಕಿನ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು. ಉಪಾಧ್ಯಕ್ಷ ದಿಗಂಬರ ದೇಸಾಯಿ, ಕಾರ್ಯದರ್ಶಿ ಪ್ರೇಮಾನಂದ ವೇಳಿಪ್, ಖಜಾಂಜಿ ಶಾಂತಾ ವೇಳಿಪ್ ಇದ್ದರು.