ಶಿರಸಿ: ಅಬಕಾರಿ ಇಲಾಖೆ ಅಧಿಕಾರಿಗಳ ಚುರುಕಿನ ಕಾರ್ಯಾಚರಣೆಯಿಂದಾಗಿ ಸೋಮವಾರ ಮಧ್ಯಾಹ್ನ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ, ಆರೋಪಿತರೊಂದಿಗೆ ವಾಹನವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ನಿರೀಕ್ಷಕ ಡಿ.ಟಿ. ನಾಯ್ಕ, ಉಪ ನಿರೀಕ್ಷಕ ವಿಜಯಕುಮಾರ್, ಸುಧೀರಕುಮಾರ್ ಅವರನ್ನೊಳಗೊಂಡ ತಂಡ ಶಿರಸಿ ಯಲ್ಲಾಪುರ ರಸ್ತೆಯ ಸೋಂದಾ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿ ಗೋವಾ ನೋಂದಣಿ ಹೊಂದಿದ ಜಿ.ಎ 02, ಜೆ 6004 ನಂಬರಿನ ಟಾಟಾ ಇಂಡಿಕಾ ಕಾರನ್ನು ಹಿಡಿದು ಚಾಲಕನನ್ನು ವಿಚಾರಣೆಗೊಳಪಡಿಸಿದಾಗ ಅಕ್ರಮ ಮದ್ಯ ಸಾಗಣೆ ಬೆಳಕಿಗೆ ಬಂದಿತು. ರು. 10850 ಮೌಲ್ಯದ ವಿವಿಧ ಬ್ರಾಂಡ್ಗಳ 38 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ವಾಹನದ ಮೊತ್ತವನ್ನು ರು. 2 ಲಕ್ಷ ಎಂದು ಅಂದಾಜಿಸಲಾಗಿದೆ. ಅಕ್ರಮ ಮದ್ಯವನ್ನು ಹಾವೇರಿ ಜಿಲ್ಲೆಯ ಚಿಕ್ಕೇರೂರಿನವರಾದ ಸಿರಾಜ್ ಹನೀಫ್ ಸಾಬ್ ಬಳ್ಳಾರಿ, ಜಖ್ರಿಯಾ ಹನೀಫ್ ಸಾಬ್ ಬಳ್ಳಾರಿ ಎನ್ನುವ ಆರೋಪಿತರು ಗೋವಾದಿಂದ ಯಲ್ಲಾಪುರ-ಶಿರಸಿ ಮಾರ್ಗವಾಗಿ ಚೆಕ್ಕೇರೂರಿಗೆ ಸಾಗಿಸುವ ಸಂದರ್ಭದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಉಪನಿರೀಕ್ಷಕ ವಿಜಯಕುಮಾರ ಪಿ.ಎಸ್. ಆರೋಪಿತರನ್ನು ಬಂಧಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.