ಕಾರವಾರ: ಇಲ್ಲಿನ ಕೋಡಿಬಾಗ ಸರ್ಕಾರಿ ಬಾಲಕರ ಮಾದರಿ ಕನ್ನಡ ಶಾಲೆ ಬಳಿ ಭಾನುವಾರ ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಕ್ರಾಂತಿವೀರ ಹೆಂಜಾ ನಾಯ್ಕ ಅವರ ಪುತ್ಥಳಿ ಅನಾವರಣ ಮಾಡಿದರು.
ನಗರದ ಸವಿತಾ ಸರ್ಕಲ್ನಿಂದ ಬೆಳಗ್ಗೆ 11ಕ್ಕೆ ಕಾರವಾರ-ಅಂಕೋಲಾ ಕೋಮಾರ ಪಂಥ ಸಮಾಜದಿಂದ ಮೆರವಣಿಗೆ ಪ್ರಾರಂಭಗೊಂಡಿತು. ಮೆರವಣಿಗೆಯಲ್ಲಿ ಹೆಂಜಾ ನಾಯ್ಕ ಅವರ ಆದರ್ಶತೆಯನ್ನು ಘೋಷಣೆ ಮೂಲಕ ಸಾರಲಾಯಿತು. ಕೋಮಾರಪಂಥದವರ ಡೊಳ್ಳು ಕುಣಿತ, ಹಾಡು, ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಹೆಂಜಾ ನಾಯ್ಕ ಅವರ ಪುತ್ಥಳಿಯನ್ನು ಭವ್ಯ ಮೆರವಣಿಗೆಯ ಮೂಲಕ ಕೋಡಿಬಾಗಕ್ಕೆ ಕೊಂಡೊಯ್ಯಲಾಯಿತು.
ಅಪ್ರತಿಮ ವೀರ: ಪುತ್ಥಳಿ ಅನಾವರಣದ ನಂತರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭವೇಶಾನಂದ ಸ್ವಾಮೀಜಿ, ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ವೀರ ಯೋಧ ಹೆಂಜಾ ನಾಯ್ಕ. ಇಂದಿನ ಯುವಜನತೆ ದೇಶಪ್ರೇಮ ಅರಿತು ಅವರ ಸ್ವಾತಂತ್ರ್ಯ, ಶೌರ್ಯ, ಸಾಹಸಗಳನ್ನು ದಾಖಲಿಸಿ ಮುಂದಿನ ಜನಾಂಗಕ್ಕೆ ತೆರೆದಿಡುವ ಕೆಲಸ ಮಾಡಿದಾಗ ಇಂತಹ ವೀರಯೋಧರ ನೆನಪು ಉಳಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾರತೀಯ ನೌಕಾ ಸೇನೆ ಕಮಾಂಡರ್ ವಿನಯ ಭೂಷಣ್ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ಉಜ್ವಲ ಲಕ್ಷಿ, ಹೆಂಜಾ ನಾಯ್ಕ ಸ್ಮಾರಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಎಸ್. ನಾಯ್ಕ, ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಕಾರವಾರ ಅಖಿಲ ಕೋಮಾರ ಪಂಥ ಸಂಘದ ಅಧ್ಯಕ್ಷ ಪ್ರಭಾಕರ ಮಾಳ್ಸೇಕರ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಸಮಾಜ ಸೇವಕಿ ಅನು ಕಳಸ, ನ್ಯಾಯವಾದಿಗಳಾದ ಕೆ.ಆರ್. ದೇಸಾಯಿ, ನಾಗರಾಜ ನಾಯಕ ಇದ್ದರು. ತಾಲೂಕು ಕಮಿಟಿ ಕೋಮಾರ ಪಂಥ ಅಧ್ಯಕ್ಷ ಆರ್.ಎಸ್. ನಾಯ್ಕ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೋಮಾರ ಪಂಥ ಸಮಾಜ ಬಾಂಧವರಿಂದ ಸರ್ವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.