ಕೆಲಸವಾಗಿಲ್ಲ ಎಂಬ ಅಸಮಾಧಾನ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ವಿಶೇಷ ಪ್ರಾಮುಖ್ಯ ಹೊಂದಿದೆ. ಜನಸಂಖ್ಯೆ ಲಕ್ಷ ತಲುಪುವ ಹಂತದಲ್ಲಿದೆ. ಶೈಕ್ಷಣಿಕ ಜಿಲ್ಲೆಯಾಗಿ ರೂಪುಗೊಂಡಿದೆ. ಜಿಲ್ಲಾ ವಿಂಗಡನೆಯಾಗಿ ಶಿರಸಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆನ್ನುವ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಜಿಲ್ಲಾ ಮಟ್ಟದ ಅನೇಕ ಸರ್ಕಾರಿ ಕಚೇರಿಗಳು ಇಲ್ಲಿವೆ. ನಗರಸಭೆಗೆ ಸಾಕಷ್ಟು ಅನುದಾನ ಬಂದಿದೆ. ಕೋಟೆಕೆರೆ ಈಜುಗೋಳ ಮಾಡುವ ಪ್ರಯತ್ನ ಅರ್ಧಕ್ಕೆ ನಿಂತಿದೆ. ನಗರದಲ್ಲಿ ಕುಡಿವ ನೀರಿನ ಸಮಸ್ಯೆ, ಚರಂಡಿ, ಒಳ ರಸ್ತೆಗಳ ಸಮಸ್ಯೆಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಅಗತ್ಯದ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ನಗರಸಭೆ ಕಾರ್ಯನಿರ್ವಹಿಸಿಲ್ಲ ಎನ್ನುವ ಅಸಮಾಧಾನ ವ್ಯಾಪಕವಾಗಿದೆ. ಈ ದಿಸೆಯಲ್ಲಿ ಶಿರಸಿ ವಾರ್ಡ್ವಾರು ಅಭಿವೃದ್ಧಿ ಕುರಿತು ವಿಶ್ವಾಮಿತ್ರ ಹೆಗಡೆ, ವಿನಯ್ ದಂಟಕಲ್ ಮಾಹಿತಿ ನೀಡಿದ್ದಾರೆ.
ಸರಾಗವಾಗಿ ಹರಿಯದ ನೀರು
ಬಿಜೆಪಿಯಿಂದ ಆಯ್ಕೆಯಾದ ರಮೇಶ ರಾಮಾ ಭಟ್ಟ ಈ ವಾರ್ಡ್ನ ಸದಸ್ಯರು. ನಿವೃತ್ತ ನೌಕರರು. ನೌಕರರನ್ನು ಹೊಂದಿರುವ ನಗರದ ವಾರ್ಡ್ಗಳಲ್ಲೊಂದಾದ ನಾಲ್ಕನೇ ವಾರ್ಡ್ ವ್ಯಾಪ್ತಿಗೆ ನಿತ್ಯಾನಂದ ಮಠ ರಸ್ತೆಯಿಂದ ವಿದ್ಯಾನಗರ ರಸ್ತೆಯವರೆಗೆ ಹಾಗೂ ಯಲ್ಲಾಪುರ ರಸ್ತೆ, ಹೊಸಪೇಟೆ ರಸ್ತೆಯ ಭಾಗಗಳು ಬರುತ್ತವೆ. ಪ್ರಮುಖ ವಸತಿಗೃಹಗಳಿವೆ. ಮುಖ್ಯ ರಸ್ತೆಗಳು ಚೆನ್ನಾಗಿವೆ. ಕಿರು ರಸ್ತೆಗಳ ಪರಿಸ್ಥಿತಿ ದೇವರಿಗೆ ಪ್ರೀತಿ. ಹೊಸಪೇಟೆ ರಸ್ತೆ, ಯಲ್ಲಾಪುರ ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ಈ ವಾರ್ಡ್ನ ಪ್ರಮುಖ ಸಮಸ್ಯೆಗಳಲ್ಲೊಂದು. ನಗರಸಭೆ ಈ ವಾರ್ಡ್ನಲ್ಲೇ ಇದೆ. ವಿದ್ಯಾನಗರ ಭಾಗದ ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಕುಡಿಯುವ ನೀರಿನ ಸಮಸ್ಯೆ ಈ ಭಾಗದಲ್ಲಿ ಹೆಚ್ಚಿದೆ. ಮರಾಠಿಕೊಪ್ಪದ ಒಳ ಪ್ರದೇಶಗಳ ರಸ್ತೆಗಳು ಇನ್ನೂ ಡಾಂಬರೀಕರಣದ ಭಾಗ್ಯವನ್ನು ಕಂಡಿಲ್ಲ. ಮಳೆಗಾಲದಲ್ಲಿ ಬೆಳ್ಳಿಮನೆ ಕಾಂಪ್ಲೆಕ್ಸ್ ಎದುರಿನ ರಸ್ತೆ ನೀರಿನಿಂದಾವೃತವಾಗುತ್ತದೆ. ಈ ವರೆಗೂ ನೀರು ಸರಾಗವಾಗಿ ಹೋಗುವಂತೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದು ನಗರದ ಹೊರವಲಯದ ಹೆದ್ದಾರಿಯಾಗಿರುವುದರಿಂದ ರಸ್ತೆ ಸಂಚಾರ ದಟ್ಟಣೆ ಹೆಚ್ಚಿರುತ್ತದೆ.
ಅಲ್ಪಸಂಖ್ಯಾತರ ಮತ ನಿರ್ಣಾಯಕ
ಕಾಂಗ್ರೆಸ್ನ ಲತಾ ಪ್ರಭುದೇವ ಅವರು ಪ್ರತಿನಿಧಿಸುತ್ತಿರುವ ಈ ವಾರ್ಡ್ನ ವ್ಯಾಪ್ತಿಗೆ ಕಸ್ತೂರಬಾ ನಗರ ಭಾಗಶಃ ಪ್ರದೇಶ ಹಾಗೂ ಸುತ್ತಮುತ್ತಲ ಪ್ರದೇಶಗಳು ಬರುತ್ತವೆ. ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳೇ ಹೆಚ್ಚಿರುವ ಈ ವಾರ್ಡ್ನ ಅಭಿವೃದ್ಧಿ ಕುರಿತಂತೆ ಮಲತಾಯಿ ಧೋರಣೆಯನ್ನು ಅನುಸರಿಸಲಾಗಿದೆ ಎನ್ನುವುದು ಸದಸ್ಯರಾದಿಯಾಗಿ ಈ ವಾರ್ಡ್ನ ಸಾರ್ವಜನಿಕರ ಆರೋಪವಾಗಿದೆ. ನೈರ್ಮಲ್ಯದ ವಿಷಯದಲ್ಲೂ ಈ ವಾರ್ಡ್ ಹಿಂದುಳಿದಿದೆ. ವಾರ್ಡ್ನ ಯಾವುದೇ ರಸ್ತೆಗಳು ಹೊಂಡರಹಿತವಾಗಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ಶೌಚಾಲಯವಂತೂ ಇಲ್ಲವೇ ಇಲ್ಲ. ಈ ವಾರ್ಡ್ನ ಸದಸ್ಯರು ಪದೇ ಪದೆ ತಮ್ಮ ವಾರ್ಡ್ಗೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ ಎಂದು ಅಲವತ್ತುಕೊಂಡಿದ್ದರೂ ನಗರಭಾಧ್ಯಕ್ಷರು ಅದರ ಕುರಿತು ಗಮನ ಹರಿಸಿಲ್ಲ. ಮಳೆಗಾಲದಲ್ಲಿ ಸಂಚಾರದ ಸಮಸ್ಯೆ ಎದುರಾಗುತ್ತದೆ. ಕೆಳ, ಮಧ್ಯಮ, ಕೂಲಿಕಾರ್ಮಿಕರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ವಾರ್ಡ್ಗೆ ಕಾಯಕಲ್ಪದ ಅಗತ್ಯವಿದೆ. ಈ ವಾರ್ಡ್ಗೆ ಎಲ್ಲ ಸೌಲಭ್ಯಗಳೂ ಅಗತ್ಯವಾಗಿದೆ. ಒಂದಕ್ಕಿಂತ ಹೆಚ್ಚಿನ ಶೌಚಾಲಯಗಳ ಅಗತ್ಯ ಈ ವಾರ್ಡ್ಗಿದೆ. ಅತಿಕ್ರಮಣ ವ್ಯವಸ್ಥೆ ಹೆಚ್ಚಿದೆ. ನಗರಸಭಾಧ್ಯಕ್ಷರ ಮೇಲೆ ಒತ್ತಡ ಹೇರುವಲ್ಲಿ ವಾರ್ಡ್ ಸದಸ್ಯರು ವಿಫಲರಾಗಿದ್ದಾರೆ ಎನ್ನುವ ದೂರುಗಳಿವೆ.
ಮಲತಾಯಿ ಧೋರಣೆ
ಸತತ ಐದನೇ ಸಾರಿ ಚುನಾವಣೆಗೆ ಸ್ಪರ್ಧಿಸಿ ಹ್ಯಾಟ್ರಿಕ್ ವಿಜಯದ ಕನಸಿನಲ್ಲಿರುವ ಹಾಲಿ ಸದಸ್ಯ ಕಾಂಗ್ರೆಸ್ನ ರಾಚಪ್ಪ ಜೋಗಳೇಕರ್ ಅವರು ಪ್ರತಿನಿಧಿಸುವ ವಾರ್ಡ್ ಇದಾಗಿದೆ. ಬಾಪೂಜಿನಗರ, ಸ್ಟೇಟ್ ಬ್ಯಾಂಕ್ ಕಾಲೋನಿ, ಶಾಂತಿ ನಗರ, ಪ್ರಗತಿ ನಗರ ಮಹಾಲಕ್ಷ್ಮಿ ಲೇಔಟ್, ಕೆಎಚ್ಬಿ ಕಾಲೋನಿಯ ಭಾಗಶಃ ಪ್ರದೇಶಗಳನ್ನೊಳಗೊಂಡಿರುವ ಈ ವಾರ್ಡ್ನಲ್ಲಿ ಕೊಪ್ಪರಿಗೆ ಕೆಂಡಮಹಾಸತಿ ದೇವಸ್ಥಾನವಿದೆ. ಹುಬ್ಬಳ್ಳಿ ಮತ್ತು ಯಲ್ಲಾಪುರಕ್ಕೆ ಹೋಗುವ ಮುಖ್ಯ ರಸ್ತೆ ಹಾದು ಹೋಗಿದೆ. ಈ ವಾರ್ಡ್ಗೆ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎನ್ನುವ ಆರೋಪವಿದೆ. ಪ್ರಮುಖ ಸಮಸ್ಯೆಯೇ ರಸ್ತೆಗಳದ್ದಾಗಿದೆ. ಬಹುತೇಕ ರಸ್ತೆಗಳು ಹೊಂಡಗುಂಡಿಗಳ ತಾಣವಾಗಿದೆ. ಹುಬ್ಬಳ್ಳಿ ರಸ್ತೆಯಿಂದ ಶಾಂತಿನಗರಕ್ಕೆ ಬರುವ ರಸ್ತೆ, ಕೊಪ್ಪರಿಗೆ ಕೆಂಡಮಹಾಸತಿ ದೇವಸ್ಥಾನದಿಂದ ಪ್ರಗತಿನಗರಕ್ಕೆ ತೆರಳುವ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿವೆ. ಎಪಿಎಂಸಿ ಕಡೆಗೆ ಸಾಗುವ ರಸ್ತೆಯ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳವರು, ಮಧ್ಯಮ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿಗಳವರು ಸುಶಿಕ್ಷಿತರಾಗಿದ್ದಾರೆ. ಸಾರ್ವಜನಿಕ ಶೌಚಾಲಯದ ಕೊರತೆಯಿದೆ.
ಗೆಲವು ಸುಲಭ ಸಾಧ್ಯವಲ್ಲ
ಬಿಜೆಪಿಯ ಶಕುಂತಲಾ ಚನ್ನಬಸಪ್ಪ ಹಲಸಿಯವರು ಪ್ರತಿನಿಧಿಸುತ್ತಿರುವ ಈ ವಾರ್ಡ್ ವಿವೇಕಾನಂದ ನಗರ, ಕೆಎಚ್ಬಿ ಕಾಲೋನಿ ಪ್ರದೇಶಗಳನ್ನೊಳಗೊಂಡಿದೆ. ಮಧ್ಯಮ ವರ್ಗ, ಕೆಳವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ವಾಸಸ್ಥಳವಾಗಿದೆ. ಮುಖ್ಯ ರಸ್ತೆಗಳು ಚನ್ನಾಗಿವೆ. ಒಳ ರಸ್ತೆಗಳು, ಉಪರಸ್ತೆಗಳು ಹೊಂಡಗುಂಡಿ ಮಯವಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಈ ವಾರ್ಡ್ ಎದುರಿಸುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಎರಡು ಕಟ್ಟಡಗಳು ಅನಾಥವಾಗಿದೆ. ಈ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಬಳಸಲಾಗುತ್ತಿದೆ ಎನ್ನುವ ಆರೋಪವಿದೆ. ಸಾರ್ವಜನಿಕ ಗ್ರಂಥಾಲಯ, ರಂಗಮಂದಿರದ ಬೇಡಿಕೆ ಹಲವು ವರ್ಷದಿಂದಿದ್ದರೂ ಈ ವರೆಗೂ ಈಡೇರಿಲ್ಲ. ಈ ಭಾಗದಲ್ಲಿ ಇನ್ನೂ ಹಲವು ಬೇಡಿಕೆಗಳಿದ್ದರೂ ವಾರ್ಡ್ ಸದಸ್ಯರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪಗಳಿವೆ. ಸಾರ್ವಜನಿಕರಿಗೆ ವಾರ್ಡ್ ಸದಸ್ಯರು ಸಿಗುವುದಿಲ್ಲ ಎನ್ನುವ ಮಾತುಗಳೂ ಕೇಳಿಬಂದಿವೆ. ಎಲ್ಲ ಜಾತಿಯ, ಸಮಾಜದ ವರ್ಗಗಳು ಸಮಾನವಾಗಿರುವ ಈ ವಾರ್ಡ್ನಲ್ಲಿ ಯಾವುದೇ ಅಭ್ಯರ್ಥಿಯ ಗೆಲುವು ಸುಲಭ ಸಾಧ್ಯವಲ್ಲ. ಸಮಸ್ಯೆಗಳಿಗೆ ಸ್ಪಂದಿಸುವ, ಭರವಸೆ ಹುಟ್ಟುಹಾಕುವ ವ್ಯಕ್ತಿಗಳು ಜಯಗಳಿಸಬಲ್ಲರು.
ಸಮರ್ಪಕ ಚರಂಡಿ ಕೊರತೆ
ಮರಾಠಿಕೊಪ್ಪ, ಕೊಪ್ಪಲ ಕಾಲೋನಿ ಪ್ರದೇಶವನ್ನು ಒಳಗೊಂಡಿರುವ ವಾರ್ಡ್ ನಂಬರ್ 5ರಲ್ಲಿ ಬಿಜೆಪಿಯ ನಂದನ ಆನಂದರಾವ್ ಸಾಗರ ಅವರು ನಗರಸಭೆ ಸದಸ್ಯರಾಗಿದ್ದಾರೆ. ಮಳೆಗಾಲದಲ್ಲಿ ನೀರು ತುಂಬಿ ಕೆರೆಯಂತಾಗುವ ಲಯನ್ಸ್ ನಗರದ ಕೆಳಭಾಗದ ಪ್ರದೇಶ ಸಮಸ್ಯೆಗಳಿಂದ ಬಳಲುತ್ತಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ವಾರ್ಡ್ನ ಮುಖ್ಯ ಸಮಸ್ಯೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಯಿದೆ. ಯಾವುದೇ ಸಾರ್ವಜನಿಕ ಶೌಚಾಲಯಗಳಿಲ್ಲ. ಮಧ್ಯಮವರ್ಗದ ಜನ ವಾಸ್ತವ್ಯ ಮಾಡುವ ಈ ಭಾಗದಲ್ಲಿ ಬೀದಿ ದೀಪದ ಸಮಸ್ಯೆಯೂ ಹೆಚ್ಚಿದೆ. ನಗರ ಸಾರಿಗೆ ಬಸ್ ಸೌಕರ್ಯ ಈ ಭಾಗಕ್ಕೆ ಸಮರ್ಪಕವಾಗಿಲ್ಲ ಎಂಬ ಆರೋಪಗಳಿವೆ. ಒಳಪ್ರದೇಶಗಳ ಕೆಲವೊಂದು ರಸ್ತೆಗಳಿಗೆ ಮಾತ್ರ ಡಾಂಬರೀಕರಣ ಮಾಡಲಾಗಿದೆ. ವೀರಶೈವರ ರುದ್ರಭೂಮಿ ಈ ವಾರ್ಡ್ನಲ್ಲಿದೆ. ಮರಾಠಿಕೊಪ್ಪ ಮುಖ್ಯ ರಸ್ತೆಯಲ್ಲಿ ನಗರ ಸಾರಿಗೆ ಬಸ್ ನಿಲ್ದಾಣದ ಸೌಲಭ್ಯವಿಲ್ಲ. ಹೊಸ ಬಡಾವಣೆಗಳು ತಲೆಯೆತ್ತುತ್ತಿದ್ದರೂ ಅದಕ್ಕಾಗಿ ಯೋಜನಾ ಪ್ರಾಧಿಕಾರ ಯೋಜನೆಯನ್ನು ರೂಪಿಸಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ನಗರಸಭೆಯ ಹಿಂಭಾಗದ ಪ್ರದೇಶಗಳ ಅಭಿವೃದ್ಧಿಗಾಗಿ ಜನ ಎದುರು ನೋಡುತ್ತಿದ್ದಾರೆ.
ವ್ಯಾಪಾರೋದ್ಯಮಗಳ ಬೀಡು
ಚೌಕಿಮಠ, ಪಡ್ತಿಗಲ್ಲಿ, ಬಣ್ಣದಮಠ, ಟಿ.ವಿ. ಸ್ಟೇಶನ್ ರಸ್ತೆ, ಭೂತೇಶ್ವರ ಕಾಲೋನಿ, ನಟರಾಜ ರಸ್ತೆ, ನಾಡಿಗಲ್ಲಿ, ಚನ್ನಪಟ್ಟಣ ಬಝಾರ್ ರಸ್ತೆ ಕೆಳಭಾಗದ ಪ್ರದೇಶಗಳನ್ನೊಳಗೊಂಡಿರುವ ಈ ವಾರ್ಡ್ನಲ್ಲಿ ಹೆಚ್ಚಿನ ಜನರು ಸುಶಿಕ್ಷಿತರು. ಬಿಜೆಪಿಯ ಅರುಣ ಭಿಕ್ಕು ಕೋಡ್ಕಣಿ ಅವರು ವಾರ್ಡ್ನ್ನು ಪ್ರತಿನಿಧಿಸುತ್ತಿದ್ದಾರೆ. ವ್ಯಾಪಾರೋದ್ಯಮಗಳ ಬೀಡಾಗಿದೆ. ಜನನಿಬಿಡ ಪ್ರದೇಶ ಹೊಂದಿದೆ. ದೇವಿಕೆರೆ ಎನ್ನುವ ಪ್ರದೇಶ ಭಾಗಶಃ ಒಳಗೊಂಡಿದ್ದರೂ ಅತಿಕ್ರಮಣ ಹೆಚ್ಚಾಗಿ ಕೆರೆ ಕಾಣದಾಗಿದೆ. ದೇವಿಕೆರೆಗೆ ಕಾಯಕಲ್ಪ ನೀಡಬೇಕೆಂಬ ಕೂಗಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಅಭಿವೃದ್ಧಿ ನಡೆದಿದ್ದರೂ ಕಳಪೆ ಕಾಮಗಾರಿಯ ಆರೋಪವನ್ನೂ ಎದುರಿಸುತ್ತಿದೆ. ಇತಿಹಾಸ ಪ್ರಸಿದ್ಧ ಮುಸುಕಿನ ಬಾವಿ ಈಗ ನೇಪಥ್ಯ ಸೇರುವ ಹಂತದಲ್ಲಿದೆ. ಕಾಯಕಲ್ಪ ನೀಡಲಾಗಿದ್ದ ಮುಸುಕಿನ ಬಾವಿಯ ಕುರುಹುಗಳೆಲ್ಲ ಹಾಳಾಗುತ್ತಿವೆ. ಪ್ರಮುಖ ರಸ್ತೆಗಳ ಪಕ್ಕದಲ್ಲಿ ಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಒಳ ರಸ್ತೆಗಳ ಚರಂಡಿ ಅವೈಜ್ಞಾನಿಕವಾಗಿದ್ದು, ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತದೆ. ಇಕ್ಕಟ್ಟಾದ ರಸ್ತೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆಯಿದೆ. ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವುದು ಈ ವಾರ್ಡ್ನ ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲೊಂದಾಗಿದೆ.
ಶೌಚಾಲಯ ನಿರ್ವಹಣೆ ಸರಿಯಿಲ್ಲ
ನಗರದ ಶಿಕ್ಷಿತ ಜನರನ್ನು ಹೊಂದಿರುವ ಪ್ರದೇಶಗಳಲ್ಲೊಂದಾದ ಮೂರನೇ ವಾರ್ಡ್ ಕೋರ್ಟ್ ರಸ್ತೆ, ರಾಘವೇಂದ್ರ ಮಠ ಸರ್ಕಲ್, ಹಳೆ ಪೊಲೀಸ್ ಕ್ವಾಟರ್ಸ್, ಭಗತ್ಸಿಂಗ್ ರಸ್ತೆ, ಅಭಿಮನ್ಯು ವೃತ್ತ ಪ್ರದೇಶಗಳನ್ನೊಳಗೊಂಡಿದೆ. ನ್ಯಾಯಾಲಯ ಸಂಕೀರ್ಣ, ಮಾರಿಕಾಂಬಾ ಕಾಲೇಜು, ತೋಟಗಾರಿಕಾ ಇಲಾಖೆ, ತಾಪಂ ಕಚೇರಿ, ಪೊಲೀಸ್ ಠಾಣೆ, ರಾಘವೇಂದ್ರ ಕಲ್ಯಾಣ ಮಂಟಪ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಮಿನಿ ವಿಧಾನಸೌಧ ಈ ಮುಂತಾದ ಸರ್ಕಾರಿ, ಸಾರ್ವಜನಿಕ ಹಾಗೂ ಖಾಸಗಿ ಕಚೇರಿಗಳನ್ನು ಹೊಂದಿರುವ ಈ ವಾರ್ಡ್ನ ಸದಸ್ಯರಾಗಿದ್ದವರು ಬಿಜೆಪಿಯ ಕೆರಿಯಾ ರಾಮಾ ಬೋರ್ಕರ್. ಈ ವಾರ್ಡ್ನಲ್ಲಿ ಹೆಚ್ಚಿನ ರಸ್ತೆಗಳು ಮುಖ್ಯ ರಸ್ತೆಗಳೇ ಆಗಿರುವುದರಿಂದ ರಸ್ತೆ ಸರಿಯಿಲ್ಲ ಎಂಬ ದೂರಿಲ್ಲ. ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ. ಯಾವುದೇ ಶೌಚಾಲಯಗಳಿಲ್ಲ. ಮಿನಿ ವಿಧಾನಸೌಧದ ಹಿಂಭಾಗದಲ್ಲಿ ಶೌಚಾಲಯವಿದೆ. ಆದರೆ ಅದರ ನಿರ್ವಹಣೆ ಸರಿಯಿಲ್ಲದೇ ಗಬ್ಬೆದ್ದು ನಾರುವಂತಾಗಿದೆ. ಈ ವಾರ್ಡ್ನ ವ್ಯಾಪ್ತಿಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯೂ ಇದೆ.
ಮೂಲ ಸೌಕರ್ಯಕ್ಕೆ ಆದ್ಯತೆ ಬೇಕಿದೆ
ಬಿಜೆಪಿಯ ವೀಣಾ ವಿನಾಯಕ ಶೆಟ್ಟಿ ಅವರು ಪ್ರತಿನಿಧಿಸುತ್ತಿರುವ ಈ ವಾರ್ಡ್ನ ವ್ಯಾಪ್ತಿಗೆ ವಿನಾಯಕ ಕಾಲೋನಿ, ಟಿಎಸ್ಎಸ್ ರಸ್ತೆ, ದೇವಿಕೆರೆ, ನಟರಾಜ ರಸ್ತೆಯ ಪ್ರದೇಶಗಳು ಬರುತ್ತವೆ. ದೇವಿಕೆರೆಯ ಭೂತಪ್ಪನ ಕಟ್ಟೆ ಈ ಪ್ರದೇಶದ ಜನರ ಶ್ರದ್ಧಾ ಕೇಂದ್ರ. ಖಾಸಗಿ ಆಸ್ಪತ್ರೆಗಳು ಇಲ್ಲಿವೆ. ಒಳ ಪ್ರದೇಶದ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹರಸಾಹಸ ಪಡಬೇಕು. ವಿನಾಯಕ ಕಾಲೋನಿಯ ಮುಖ್ಯರಸ್ತೆ ಮತ್ತು ಒಳರಸ್ತೆಗಳು ಡಾಂಬರೀಕರಣ ಕಂಡಿಲ್ಲ. ವ್ಯಾಪಾರಸ್ಥರು, ಮಧ್ಯಮವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಶಿಕ್ಷಿತರ ಸಂಖ್ಯೆಯೂ ಗಣನೀಯವಾಗಿದೆ. ಎಲ್ಲ ಜಾತಿಗಳು ಸಮನ್ವಯತೆಯಿಂದಿವೆ. ಮಳೆಗಾಲದಲ್ಲಿ ತಗ್ಗಿರುವ ಪ್ರದೇಶದಲ್ಲಿ ನೀರಿನಿಂದ ತುಂಬಿಕೊಳ್ಳುತ್ತದೆ. ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ರಸ್ತೆ ಸುಧಾರಣೆ, ಚರಂಡಿ ಕಾಮಗಾರಿಗಳನ್ನೊಳಗೊಂಡಂತೆ ಮೂಲಭೂತ ಸೌಕರ್ಯಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು ಎನ್ನುವ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಮಾಜಿ ಸಚಿವ ವಿವೇಕಾನಂದ ವೈದ್ಯರ ನಿವಾಸ ಈ ವಾರ್ಡ್ನ ವ್ಯಾಪ್ತಿಯಲ್ಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಸದಸ್ಯರು ಬೇಕಾಗಿದ್ದಾರೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇವಿಕೆರೆಯ ಹೊಂಡಮಯ ರಸ್ತೆಯನ್ನು ಮರುಡಾಂಬರೀಕರಣದ ಮೂಲಕ ರಿಪೇರಿ ಮಾಡಲಾಗಿದೆ.
ರಸ್ತೆಗಳ ಪರಿಸ್ಥಿತಿ ದೇವರಿಗೆ ಪ್ರೀತಿ
ದುಂಡಸೀ ನಗರ, ಟಿಎಸ್ಎಸ್ ರಸ್ತೆಯ ಅರ್ಧ ಭಾಗ, ಜಯನಗರ, ಎಪಿಎಂಸಿ ಈ ಮುಂತಾದ ಪ್ರದೇಶಗಳನ್ನು ಈ ವಾರ್ಡ್ ಒಳಗೊಂಡಿದೆ. ಬಿಜೆಪಿಯ ಉದಯಕುಮಾರ ಮಂಜುನಾಥ ಕಳೂರು ಈ ಭಾಗವನ್ನು ಪ್ರತಿನಿಧಿಸುತ್ತಿರುವ ಸದಸ್ಯರಾಗಿದ್ದಾರೆ. ಈ ವಾರ್ಡ್ನ ಹೆಚ್ಚಿನ ಜನರು ಸುಶಿಕ್ಷಿತರು. ಮೇಲ್ಮಧ್ಯಮ ವರ್ಗ, ಮಧ್ಯಮ ವರ್ಗದ ಜನರು ಹೆಚ್ಚಿದ್ದಾರೆ. ಜಯನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ. ಜಯನಗರ, ಎಪಿಎಂಸಿಯ ಹೊರಭಾಗದ ರಸ್ತೆ ಹೊಂಡಮಯವಾಗಿದೆ. ದುಂಡಸೀ ನಗರದ ರಸ್ತೆಗಳೂ ಹಾಳಾಗಿದೆ. ಟಿಎಸ್ಎಸ್ ರಸ್ತೆ ಹಾಗೂ ಎಪಿಎಂಸಿಯ ಒಳಭಾಗದ ರಸ್ತೆಗಳನ್ನು ಹೊರತುಪಡಿಸಿದರೆ ಉಳಿದ ರಸ್ತೆಗಳ ಪರಿಸ್ಥಿತಿ ಅಷ್ಟಕ್ಕಷ್ಟೇ. ದುಂಡಸಿ ನಗರದ ಕೆಳಭಾಗದ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಆ ಪ್ರದೇಶದ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆಯಿದೆ. ವಿನಾಯಕ ಕಾಲೋನಿಯಲ್ಲಿ ದೇವಸ್ಥಾನವಿದೆ. ಕಾಯಕಲ್ಪದ ಅಗತ್ಯವಿದೆ. ಸುಶಿಕ್ಷಿತರು ಈ ವಾರ್ಡ್ನಲ್ಲಿ ಹೆಚ್ಚಿದ್ದರೂ ಜಾತಿ ಆಧಾರಿತ ವ್ಯಕ್ತಿಗೆ ಆದ್ಯತೆ. ಅಭಿವೃದ್ಧಿ ಕೆಲಸ ಮಾಡುವವರು ಜಯಗಳಿಸಬಲ್ಲರು. ಈ ವಾರ್ಡ್ನಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯಗಳಿಲ್ಲ.
ಕಸ ವಿಲೇವಾರಿ ಸಮಸ್ಯೆ
ಕಾಂಗ್ರೆಸ್ಸಿನ ರುಕ್ಸಾನಾ ಹೀರೂರ ಎಂ. ಖಾನ್ ಅವರು ಪ್ರತಿನಿಧಿಸುತ್ತಿರುವ ಈ ವಾರ್ಡ್ ಇಂದಿರಾನಗರ, ಗೌಳಿಗಲ್ಲಿ, ತಿಲಕನಗರ ಪ್ರದೇಶಗಳನ್ನೊಳಗೊಂಡಿದೆ. ಇದು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ವಾರ್ಡ್ಗಳಲ್ಲೊಂದಾಗಿದೆ. ಕಾಂಗ್ರೆಸ್ ಜಿಲ್ಲಾ ಕಚೇರಿ ಈ ವಾರ್ಡ್ನ ವ್ಯಾಪ್ತಿಯಲ್ಲೇ ಇದೆ. ಆದರೂ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದೆ. ಕಾಂಗ್ರೆಸ್ ಕಚೇರಿಗೆ ತೆರಳುವ ರಸ್ತೆಯ ಸಮಾನಾಂತರವಾಗಿರುವ ಇನ್ನೊಂದು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಸಮರ್ಪಕ ಮೋರಿಗಳಿಲ್ಲದೇ ಕೊಳಚೆ ನೀರು ಅಲ್ಲಲ್ಲಿ ಕಟ್ಟಿಕೊಂಡಿರುತ್ತವೆ. ಇಕ್ಕಟ್ಟಾದ ರಸ್ತೆಗಳು, ಕೋಟೆಕೆರೆಯ ದೊಡ್ಡ ಮೋರಿ ಈ ವಾರ್ಡ್ನ ದೊಡ್ಡ ಸಮಸ್ಯೆಯೂ ಹೌದು. ಕೋಟೆಕೆರೆಯ ಒಂದು ಭಾಗ ಈ ವಾರ್ಡ್ಗೆ ಸೇರುತ್ತದೆ. ಇದರ ಸುತ್ತಮುತ್ತಲ ಭಾಗಗಳು ಗಬ್ಬೆದ್ದು ಹೋಗಿರುವುದರಿಂದ ಕೊಟೆಕೆರೆ ದಂಡೆಯ ಮೇಲೆ ವಿಶ್ರಾಂತಿಗೆ ಆಗಮಿಸುವ ಸಾರ್ವಜನಿಕರು ಮೂಗು ಮುರಿಯುವಂತಾಗಿದೆ. ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ. ಕೋಟೆಕೆರೆಯಿಂದ ಟಿಎಸ್ಎಸ್ ರಸ್ತೆಗೆ ಆಗಮಿಸುವ ರಸ್ತೆಯಲ್ಲಿ ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಗಳು ಮರು ಡಾಂಬರೀಕರಣ ಕಂಡಿಲ್ಲ. ಸಾರ್ವಜನಿಕ ಶೌಚಾಲಯದ ಸಮಸ್ಯೆ ಪ್ರಮುಖವಾಗಿದೆ.
ಅನುದಾನಕ್ಕೆ ತಕ್ಕ ಕೆಲಸವಾಗಿಲ್ಲ
ನಗರಸಭಾಧ್ಯಕ್ಷ ರವಿ ಚಂದಾವರ ಅವರು ಪ್ರತಿನಿಧಿಸುತ್ತಿರುವ ವಾರ್ಡ್ ಇದಾಗಿದೆ. ಅಯ್ಯಪ್ಪ ನಗರ, ಕೆಳಗಿನ ಗುಡ್ಡದ ಮನೆ, ಕೆಎಸ್ಆರ್ಟಿಸಿ ಡಿಪೋ ಎದುರು ಭಾಗಗಳು ಈ ವಾರ್ಡ್ಗೆ ಸೇರುತ್ತವೆ. ನಗರಸಭಾಧ್ಯಕ್ಷರ ಕ್ಷೇತ್ರವಾದ್ದರಿಂದ ಈ ವಾರ್ಡ್ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಹೆಚ್ಚಿನ ಅನುದಾನವೂ ಈ ವಾರ್ಡ್ಗೆ ಲಭ್ಯವಾಗಿದೆ. ಈ ವಾರ್ಡ್ನ ರಸ್ತೆಗಳನ್ನು ಮರು ಡಾಂಬರೀಕರಣಗೊಳಿಸಲಾಗಿದೆ. ಚರಂಡಿ ವ್ಯವಸ್ಥೆ ನಿರ್ವಹಣೆ ಮಾಡಿದ್ದರೂ, ಕೆಲ ಕಡೆಗಳಲ್ಲಿ ಸಮರ್ಪಕವಾಗಿ ನಡೆದಿಲ್ಲ ಎನ್ನುವ ಆರೋಪಗಳಿವೆ. ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿದೆ. ನಗರಸಭಾಧ್ಯಕ್ಷರ ವಾರ್ಡ್ನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ತಮ್ಮ ವಾರ್ಡ್ಗೆ ಹೆಚ್ಚಿನ ಅನುದಾನವನ್ನು ಹಾಕಿಸಿಕೊಂಡಿದ್ದಾರೆ ಎನ್ನುವ ಆರೋಪ ಕಾಂಗ್ರೆಸ್ ಸದಸ್ಯರದ್ದಾಗಿದೆ. ಆದರೆ ತೊಡಗಿಸಿದ ಅನುದಾನಕ್ಕೆ ತಕ್ಕ ಕೆಲಸವಾಗಿಲ್ಲ ಎಂಬ ಆರೋಪವೂ ನಗರಸಭಾಧ್ಯಕ್ಷರ ಮೇಲಿದೆ. ಹುಬ್ಬಳ್ಳಿ ರಸ್ತೆಯಲ್ಲಿ ಸಿಮೆಂಟ್ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಅದರ ಅಕ್ಕಪಕ್ಕ ಸಮರ್ಪಕವಾಗಿ ಚರಂಡಿ ನಿರ್ಮಿಸಿಲ್ಲ. ಸಿಮೆಂಟ್ ಕಾಮಗಾರಿಯ ವಿಳಂಬ ರವಿ ಚಂದಾವರರಿಗೆ ವಿರುದ್ಧ ಕೆಲಸ ಮಾಡಬಹುದು.
ಅಭಿವೃದ್ಧಿ ಕಾಮಗಾರಿಗಳಾಗಿಲ್ಲ
ಕೊಳಗೇರಿ ನಿವಾಸಿಗಳು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ವಾರ್ಡ್ನ ಸದಸ್ಯ ರಾಜಾನಂದ ಹನುಮಂತಪ್ಪ ದೇಶಳ್ಳಿ. ಗಣೇಶನಗರದ ಭಾಗಶಃ ಪ್ರದೇಶ, ಗೋಸಾವಿಗಲ್ಲಿ, ವಡ್ಡರ ಓಣಿ ಪ್ರದೇಶಗಳನ್ನು ಹೊಂದಿರುವ ಈ ವಾರ್ಡ್ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದೆ. ನಗರಸಭೆ ಬಿಜೆಪಿ ಕೈಯಲ್ಲಿದ್ದರೂ ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಕ ರೀತಿಯಲ್ಲಿ ನಡೆಸಿಲ್ಲ ಎನ್ನುವ ದೂರಿದೆ. ಹೊಸ ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶ ಈ ವಾರ್ಡ್ನ ವ್ಯಾಪ್ತಿಗೆ ಬರುತ್ತದೆ. ಮುಖ್ಯ ರಸ್ತೆಗಳನ್ನು ಅಲ್ಲಲ್ಲಿ ಮರುಡಾಂಬರೀಕರಣದ ಮೂಲಕ ಸರಿಪಡಿಸಲಾಗಿದೆ. ಆದರೆ ಚಿಕ್ಕ ಚಿಕ್ಕ ಓಣಿಗಳಿಗೆ ತೆರಳುವ ರಸ್ತೆಗಳು, ಕೆಲವು ಕಡೆಗಳಲ್ಲಿ ಹೊಂಡಗುಂಡಿಗಳ ತಾಣ ಹಾಗೇ ಇದೆ. ಚರಂಡಿ ಅಸಮರ್ಪಕವಾಗಿರುವ ಕಾರಣ ಈ ವಾರ್ಡ್ ಮತದಾರರು ಅಸಮಧಾನಗೊಂಡಿದ್ದಾರೆ. ಈ ಪ್ರದೇಶದಲ್ಲೂ ಅತಿಕ್ರಮಣದಾರರ ಸಮಸ್ಯೆಯಿದೆ. ಬಡವರಿಗೆ ನಿವೇಶನ ಹಂಚಿಕೆಯಾಗಬೇಕೆನ್ನುವ ಕೂಗಿದೆ. ಮೂಲಭೂತ ಸೌಕರ್ಯ ಒದಗಿಸಬೇಕು ಎನ್ನುವುದು ಈ ಪ್ರದೇಶ ನಿವಾಸಿಗಳ ಆಗ್ರಹವಾಗಿದೆ. ಅಲ್ಪಸಂಖ್ಯಾತರು ಸಾಕಷ್ಟು ಸಂಖ್ಯೆಯಲ್ಲಿರುವುದು ಅಭ್ಯರ್ಥಿಗಳ ಪರ ಕೆಲಸ ಮಾಡಲಿದೆ.
ಜಾತಿ ಆಧಾರಿತ ವ್ಯಕ್ತಿಗೆ ಆದ್ಯತೆ
ಗಣೇಶನಗರ ಅರ್ಧ ಭಾಗ ಹಾಗೂ ರಾಮನಗರವನ್ನು ಒಳಗೊಂಡಿರುವ ಈ ವಾರ್ಡ್ನಲ್ಲಿ ಕಳೆದ ಅವಧಿಯಲ್ಲಿ ಕಾಂಗ್ರೆಸ್ನಿಂದ ಸುಧಾಕರ ಶ್ರೀನಿವಾಸ ಶೆಟ್ಟಿ ಆಯ್ಕೆಯಾಗಿದ್ದರು. ಬಿಜೆಪಿ ಆಡಳಿತದಲ್ಲಿರುವ ನಗರಸಭೆ, ಕಾಂಗ್ರೆಸ್ ಸದಸ್ಯರ ಈ ವಾರ್ಡ್ಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂಬ ಆರೋಪ ಸದಸ್ಯರದ್ದಾಗಿದೆ. ಈ ವಾರ್ಡ್ನ ಭಾಗದಲ್ಲಿ ರಸ್ತೆ, ಚರಂಡಿ ಕಾಮಗಾರಿಗಳು ನಡೆಯಬೇಕಿದೆ. ಬೀದಿ ದೀಪಗಳನ್ನು ಸಮರ್ಪಕವಾಗಿ ಅಳವಡಿಸಿಲ್ಲ. ಕುಡಿಯುವ ನೀರಿನ ಸಮಸ್ಯೆಯಿದೆ. ವಾರ್ಡ್ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ಹುಲೆಕಲ್ ಕಡೆಗೆ ಹೋಗುವ ರಸ್ತೆಯನ್ನು ಹೊರತುಪಡಿಸಿದರೆ ಒಳ ರಸ್ತೆಗಳು ದುರಸ್ತಿ ಭಾಗ್ಯ ಕಂಡಿಲ್ಲ. ಈ ವಾರ್ಡ್ನಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯಗಳಿಲ್ಲ. ಗಣೇಶನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಹುತೇಕರು ಬಿಪಿಎಲ್ಕಾರ್ಡುದಾರರಾಗಿದ್ದಾರೆ. ಅತಿಕ್ರಮಣದಾರರ ಸಂಖ್ಯೆಯೂ ಸಾಕಷ್ಟಿದೆ. ಆಶ್ರಯ ಮನೆಗಳ ಬೇಡಿಕೆಯಿದೆ. ನೈರ್ಮಲೀಕರಣಕ್ಕೆ ಆದ್ಯತೆ ನೀಡಲಾಗಿಲ್ಲ ಎನ್ನುವ ದೂರಿದೆ. ಹುತ್ಗಾರ್ ಗ್ರಾಪಂಗೆ ಗಣೇಶನಗರದ ಕೆಲ ಮನೆಗಳು ಸೇರ್ಪಡೆಗೊಂಡಿವೆ. ಜಾತಿ ಆಧಾರಿತ ವ್ಯಕ್ತಿಗೆ ಆದ್ಯತೆ.