ಕಾರವಾರ: ಇಲ್ಲಿನ ನ್ಯೂ ಹೈಸ್ಕೂಲ್ ಗ್ರೌಂಡ್ ಬಾಡದಲ್ಲಿ ಫೆ. 24ರ ಸಂಜೆ 5ರಿಂದ ರಾತ್ರಿ 11 ಗಂಟೆ ತನಕ ಸಂಗೀತ ಮಹಫಿಲ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಂದನಗದ್ದಾ ಸ್ವರ ಸಾಧನ ಸಂಗೀತ ಕಲಾ ಕೇಂದ್ರದ ಸಂಚಾಲಕ ರಾಮಾ ಬಾಂದೇಕರ ಹೇಳಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಬೈನ ಖ್ಯಾತ ಕಲಾವಿದ ಅಜಿತ್ ಕಡಕಡೆ ಹಾಗೂ ತಂಡದಿಂದ ಶಾಸ್ತ್ರೀಯ ಗಾಯನ ನಡೆಯಲಿದೆ. ಬಳಿಕ ಸದಾಶಿವಗಡ ಮತ್ತು ಸ್ವರ ಸಾಧನ ಸಂಗೀತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದುರ್ಗಾಪ್ರಸಾದ ಗಡಕರ್, ಜಗದೀಶ ಪೋಡ್ನೇಕರ್ ತಬಲಾ ಸಾಥ್ ನೀಡಲಿದ್ದಾರೆ. ಬಾಬುಶ್ ಸೈಲಕರ್ ಮತ್ತು ಅಭಿನಂದನ ಬಾಂದೇಕರ್ ಹಾರ್ಮೋನಿಯಂ ಸಾಥ್ ನೀಡುವರು. ಸ್ವರ ಸಾಧನಾ ಸಂಗೀತ ಕಾರ್ಯಕ್ರಮವನ್ನು ಚೈತನ್ಯ ಜೋಶಿ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕಾರವಾರದಲ್ಲಿ ಸಂಗೀತದ ಪ್ರಚಾರ ಮಾಡುವುದು ನಮ್ಮ ಉದ್ದೇಶ. ಮುಂದೆ ಇನ್ನಷ್ಟು ಸಂಗೀತ ಕಾರ್ಯಕ್ರಮಗಳನ್ನು ಸಂಗೀತ ಕಲಾ ಕೇಂದ್ರದಿಂದ ಆಯೋಜಿಸಲಾಗುವುದು. ಪ್ರಸ್ತುತ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸದಾಶಿವಗಡ ಸ್ವರ ಸಾಧನ ಸಂಗೀತ ಕಲಾ ಕೇಂದ್ರದ ಶಿಕ್ಷಕ ದಿನೇಶ ಗಡಕರ್ ಇದ್ದರು.