ಭಟ್ಕಳ: ಪ್ರಾದೇಶಿಕ ಮಾರುಕಟ್ಟೆಗಳಿಗೆ ತನ್ನ ಶಸ್ತ್ರಚಿಕಿತ್ಸೆ ಪರಿಣಿತಿಯನ್ನು ನೀಡಲು ಪ್ರಯತ್ನಿಸುತ್ತಿರುವ ನೋವಾ ಸ್ಪೆಷಾಲಿಟಿ ಸರ್ಜರಿಯು ಆರ್ಎನ್ಎಸ್ ಆಸ್ಪತ್ರೆ ಮುರುಡೇಶ್ವರ ಸಹಯೋಗದೊಂದಿಗೆ ತನ್ನ ಸೇವೆ ಆರಂಭಿಸಲಿದೆ ಎಂದು ನೋವಾ ಸ್ಪೆಷಾಲಿಟಿ ಸರ್ಜರಿ ವೈದ್ಯಕೀಯ ನಿರ್ದೇಶಕ ಡಾ. ಎಂ.ಜಿ. ಭಟ್ ಹೇಳಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಡೇಶ್ವರ ಮತ್ತು ಸುತ್ತಲಿನ ಜಿಲ್ಲೆಗಳ ಜನತೆಗೆ ಗುಣಮಟ್ಟದ ಆರೋಗ್ಯ ಒದಗಿಸುವ ದೃಷ್ಟಿಯಿಂದ ಆರ್ಎನ್ಎಸ್ ಆಸ್ಪತ್ರೆ ಮುರುಡೇಶ್ವರ ಸಹಯೋಗದಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು. ಮೂಳೆ ತಜ್ಞ ಡಾ. ಗೌತಮ ಮೋಡಿಕಲ್ ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಕೊರತೆ ಕಂಡು ಬರುತ್ತಿದೆ. ಉತ್ತಮ ತಂತ್ರಜ್ಞಾನ ಮೂಲಕ ಇಲ್ಲಿಯ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವ ಉದ್ದೇಶದಿಂದ ನೋವಾ ಆಸ್ಪತ್ರೆ ಈ ಭಾಗದಲ್ಲಿ ಸೇವೆ ನೀಡಲು ಮುಂದಾಗಿದೆ ಎಂದರು. ನ್ಯಾಯವಾದಿ ಆರ್.ಆರ್. ಶ್ರೇಷ್ಠಿ ಇದ್ದರು.