ಉಳವಿ ರಥೋತ್ಸವಕ್ಕೆ ಜನಸಾಗರ

Updated on: 

 ವಸಂತಕುಮಾರ್ ಕತಗಾಲ
ಕಾರವಾರ: ಶ್ರೀ ಕ್ಷೇತ್ರ ಉಳವಿಯಲ್ಲಿ ರಥೋತ್ಸವದ ಸಂಭ್ರಮದ ಕ್ಷಣಗಳನ್ನು ವೀಕ್ಷಿಸಲು, ಶ್ರದ್ಧೆ ಭಕ್ತಿಯಿಂದ ಪೂಜಿಸಲು ಉಳವಿಗೆ ಜನಸಾಗರವೇ ಹರಿದುಬರುತ್ತಿದೆ. ಸೋಮವಾರ ನಡೆಯಲಿರುವ ರಥೋತ್ಸವಕ್ಕೆ 50 ಸಾವಿರಕ್ಕೂ ಹೆಚ್ಚು ಜನರು ಸಾಕ್ಷಿಯಾಗಲಿದ್ದಾರೆ.
ಶಿವಶರಣರ ಭಕ್ತಿಯ ಕೇಂದ್ರಗಳಲ್ಲೊಂದಾದ ಉಳವಿ ಚನ್ನಬಸವ ಕ್ಷೇತ್ರದಲ್ಲಿ ಸೋಮವಾರ ನಡೆಯಲಿರುವ ರಥೋತ್ಸವಕ್ಕಾಗಿ ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರು ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.  ಅಚ್ಚರಿ ಎಂದರೆ ಸಾವಿರಾರು ಜನರು ತಿಂಗಳ ಹಿಂದೆಯೇ ಉಳವಿಗೆ ಬಂದು ಬೀಡು ಬಿಟ್ಟಿದ್ದಾರೆ. ಸಾವಿರಾರು ಜನರು ಹತ್ತಾರು ದಿನಗಳ ಹಿಂದೆಯೇ ಚಕ್ಕಡಿ ಗಾಡಿಯಲ್ಲಿ ಕುಳಿತು ಉಳವಿಯತ್ತ ಮುಖ ಮಾಡಿದ್ದಾರೆ. ಕುದುರೆ ಗಾಡಿಯಲ್ಲೂ ನೂರಾರು ಜನರು ಆಗಮಿಸಿದ್ದಾರೆ. ಟ್ರ್ಯಾಕ್ಟರ್‌ಗಳು ಸಾವಿರಾರು ಜನರನ್ನು ಹೊತ್ತು ತಂದಿವೆ. ಸಾರಿಗೆ ಸಂಸ್ಥೆ ಜಾತ್ರಾ ವಿಶೇಷ ಬಸ್ಸುಗಳ ಸಂಚಾರ ಆರಂಭಿಸಿದ್ದು ವಿವಿಧೆಡೆಯಿಂದ ಜನತೆ ಆಗಮಿಸುತ್ತಿದ್ದಾರೆ. ಬಿಜಾಪುರ, ಬೆಳಗಾವಿ, ಬಾಗಲಕೋಟೆ, ಬೀದರ, ಗುಲ್ಬರ್ಗ, ಯಾದಗಿರಿ, ಹಾವೇರಿ, ಧಾರವಾಡ, ಗದಗ ಮತ್ತಿತರ ಕಡೆಗಳಿಂದ ಜನತೆ ಆಗಮಿಸಿದ್ದು ಉಳವಿಯಲ್ಲಿ ಜನಜಂಗುಳಿ ಉಂಟಾಗಿದೆ.
ಧಾರವಾಡ ಜಿಲ್ಲೆಯ ಎತ್ತಿನ ಗುಡ್ಡದಿಂದ ಕುದುರೆ ಗಾಡಿಯಲ್ಲಿ ಬಂದ ಸಂಗಪ್ಪ ಎಂಬಾತನನ್ನು ಕನ್ನಡಪ್ರಭ ಪ್ರಶ್ನಿಸಿದಾಗ, ನಾನು ಕಳೆದ ಆರು ವರ್ಷಗಳಿಂದ ಕುದುರೆ ಗಾಡಿಯಲ್ಲಿ ಉಳವಿ ಜಾತ್ರೆಗೆ ಬರುತ್ತಿದ್ದೇನೆ. ಶನಿವಾರ ರಾತ್ರಿ ಮೂರು ಕುದುರೆ ಬಂಡಿಗಳೊಂದಿಗೆ ನಾವು 9 ಜನರು ಹೊರಟಿದ್ದು ಭಾನುವಾರ ಸಂಜೆ ಉಳವಿ ತಲುಪಿದ್ದಾಗಿ ವಿವರಿಸಿದ್ದಾನೆ.
ಉಳವಿ ದೇವಾಲಯದ ಹೊರವಲಯದಲ್ಲಿರುವ ವಿಶಾಲವಾದ ಗದ್ದೆಗಳಲ್ಲಿ ಭಕ್ತರು ಸಾವಿರಾರು ಟೆಂಟ್‌ಗಳನ್ನು ಹಾಕಿದ್ದಾರೆ. ಅಲ್ಲೇ ಊಟ ತಿಂಡಿಗಳನ್ನು ಮಾಡುತ್ತಿದ್ದಾರೆ. ಹಲವರಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳೇ ತಂಗುದಾಣಗಳಾಗಿವೆ. ಉಳವಿ ಈಗ ಉತ್ತರ ಕರ್ನಾಟಕದಂತೆ ಕಾಣಿಸುತ್ತಿದೆ. ಉಳವಿಯ ಬೀದಿ ಬೀದಿಯ ಪಕ್ಕಗಳಲ್ಲಿ ವ್ಯಾಪಾರಿ ಮಳಿಗೆಗಳು ತಲೆ ಎತ್ತಿವೆ. ವ್ಯಾಪಾರ ವಹಿವಾಟು ಜೋರಾಗಿದೆ. ವಿಶೇಷವೆಂದರೆ ಉತ್ತರ ಕರ್ನಾಟಕದ ಸಾಕಷ್ಟು ಮಾರಾಟಗಾರರು ಇಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ.
ಉಳವಿಗೆ ಆಗಮಿಸಿದ ಭಕ್ತರು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಉಳವಿಯ ತುಂಬೆಲ್ಲ ಶಿವಾಯ ನಮಃ ಎಂಬ ಘೋಷಣೆ ಮುಗಿಲುಮುಟ್ಟುತ್ತಿದೆ. ಉಳವಿಗೆ ಆಗಮಿಸುವ ಭಕ್ತರು ಬೆತ್ತಗಳನ್ನು ಕೊಂಡೊಯ್ಯುವುದು ಸಂಪ್ರದಾಯವಾಗಿ ಮಾರ್ಪಟ್ಟಿದೆ. ಹೀಗಾಗಿ ಅರಣ್ಯ ಇಲಾಖೆ ಭಕ್ತರಿಗೆ ನೀಡಲು ಬೆತ್ತಗಳನ್ನು ಸಂಗ್ರಹಿಸಿಟ್ಟಿದೆ. ಭಕ್ತರು ಈ ಬೆತ್ತಗಳಿಗಾಗಿ ಮುಗಿಬೀಳುತ್ತಿದ್ದಾರೆ. ಸುಗಮ ಸಂಚಾರ ವ್ಯವಸ್ಥೆ ಹಾಗೂ ಜಾತ್ರೆ ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ. ತಾತ್ಕಾಲಿಕ ಆಸ್ಪತ್ರೆಗಳನ್ನೂ ತೆರೆಯಲಾಗಿದೆ.
ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಶೆಟ್ಟರ್
ಭಾನುವಾರ ನಾಡಿನ ದೊರೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗಮಿಸಿದ್ದರಿಂದ ಉಳವಿಯಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಅವರೊಂದಿಗೆ ಆಗಮಿಸಿ ಉಳವಿ ಚನ್ನಬಸವನಿಗೆ ವಿಶೇಷ ಪೂಜೆ ಸಲ್ಲಿಸಿದರು. ತಾವು ಚಿಕ್ಕವನಾಗಿದ್ದಾಗಲೂ ತಂದೆಯೊಂದಿಗೆ ಉಳವಿ ದೇವಾಲಯಕ್ಕೆ ಬರುತ್ತಿದ್ದುದನ್ನು ಸ್ಮರಿಸಿದ ಜಗದೀಶ ಶೆಟ್ಟರ್ ಶಾಸಕನಾಗಿದ್ದಾಗ, ಕಂದಾಯ ಸಚಿವನಾದಾಗ ಹಾಗೂ ಈಗ ಮುಖ್ಯಮಂತ್ರಿಯಾದ ತರುವಾಯವೂ ಇಲ್ಲಿಗೆ ಆಗಮಿಸುವಂತಾಗಿದ್ದು ತಮಗೆ ಅತೀವ ಸಂತಸ ತಂದಿದೆ ಎಂದರು.
ಪ್ರತಿವರ್ಷ ಉಳವಿ ರಥೋತ್ಸವ ಹಾಗೂ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಸೋಮವಾರವೂ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ ಎಂದು ಉಳವಿ ದೇವಾಲಯ ಆಡಳಿತ ಸಮಿತಿಯ ಪ್ರಮುಖ ಸಂಜಯ ಕಿತ್ತೂರ ಕನ್ನಡಪ್ರಭಕ್ಕೆ ತಿಳಿಸಿದರು.
ಭಕ್ತರು ಹಾಗೂ ಉಳವಿಗೆ ಆಗಮಿಸುವ ಜನತೆಗಾಗಿ ತಾತ್ಕಾಲಿಕ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದರೂ ಸಂಚಾರದ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.  ಉಳವಿ ರಥೋತ್ಸವಕ್ಕೆ ಸಜ್ಜಾಗಿದ್ದು, ಭಕ್ತರ ಮಹಾಪೂರವೇ ರಥೋತ್ಸವಕ್ಕಾಗಿ ಹರಿದುಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com