ಕಾರವಾರ: ಅಪರಾಧ ನ್ಯಾಯ ವಿಚಾರಣೆಯಲ್ಲಿ ಭಾಗಿಯಾಗುವ ಎಲ್ಲರೂ ಕಾನೂನು ನಿಯಮಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ವೈದ್ಯ ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಕಾರವಾರ ಅಭಿಯೋಜಕರ ಆಶ್ರಯದಲ್ಲಿ, ಕಾರವಾರ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಅಪರಾಧ ಕಾನೂನು (ತಿದ್ದುಪಡಿ) ವಿಶೇಷ ಅಧಿನಿಯಮ- 2013 ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಅಪರಾಧ ವಿಚಾರಣೆಯಲ್ಲಿ ಪಾಲ್ಗೊಳ್ಳುವ ನ್ಯಾಯಾಧೀಶರು, ವಕೀಲರು, ಅಭಿಯೋಜಕರು, ತನಿಖಾಧಿಕಾರಿಗಳು ಕಾನೂನು ನಿಯಮಗಳನ್ನು ಸಮರ್ಪಕವಾಗಿ ಬಳಸಬೇಕು. ಅಪರಾಧ ಪ್ರಕರಣಗಳ ವಿಚಾರಣೆ ಪ್ರಾರಂಭವಾದ ದಿನದಿಂದ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ನ್ಯಾಯವಾದಿ ಡಿ.ಎಸ್. ನಾಯ್ಕ ಮಾತನಾಡಿ, ವಿಶೇಷ ಕಾಯ್ದೆಯ ಒಳಿತು-ಕೆಡಕುಗಳನ್ನು ಅಧ್ಯಯನ ಮಾಡಬೇಕು ಎಂದರು. ಯಾವ ರಾಷ್ಟ್ರದಲ್ಲಿ ಕಾನೂನು ಸಂಖ್ಯೆಗಳು ಮತ್ತು ಕಾರಾಗೃಹ ಸಂಖ್ಯೆಗಳು ಹೆಚ್ಚಿರುತ್ತದೆಯೋ ಅಂತಹ ಕಾನೂನುಗಳು ಮತ್ತು ಕಾರಾಗೃಹಗಳು ರಾಷ್ಟ್ರಕ್ಕೆ ಅಪಕೀರ್ತಿಯನ್ನು ತರುವ ಸಾಧ್ಯತೆ ಹೆಚ್ಚಾಗಿವೆ ಎಂದು ಆರ್.ಎಸ್. ಹೆಗಡೆ ಗಾಳಿ ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಕೆ.ಟಿ. ಗೌಡ ಮತ್ತಿತರರು ಕಾಯ್ದೆಯ ಸಾಧಕ-ಬಾಧಕ ಬಗ್ಗೆ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಮತ್ತು ಸ್ಥಳೀಯ ನ್ಯಾಯಾಧೀಶರುಗಳು ವಿಚಾರ ಸಂಕಿರಣದಲ್ಲಿ ಹಾಜರಿದ್ದರು.