ನಮ್ಮೂರಿಗೆ ಮೂಲ ಸೌಕರ್ಯ ಒದಗಿಸಿ: ಆಗ್ರಹ

Updated on: 

ಕನ್ನಡಪ್ರಭ ವಾರ್ತೆ ಶಿರಸಿ ಫೆ. 25  
ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಬಂಡಲ ಗ್ರಾಪಂ ವ್ಯಾಪ್ತಿಯ ಮುಂಡಗಾರ, ನೆಟಗಾರ, ಕೆರೆಗುಣಿ, ಮುಂಡಗಾರ ಜಡ್ಡಿ, ಕೇಸಿನಮನೆ, ಬುಗುಡಿ, ಮೊರತಕುಂಟ, ಸಂಪಿಕಟ್ಟೆ, ದೇವಿಗದ್ದೆ, ತೋಟದಗದ್ದೆ, ತೆಂಗಾರು ಹಾಗೂ ತಟಗಾರ ಹಳ್ಳಿಗಳ ಜನರು ಸಹಾಯಕ ಆಯುಕ್ತ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಂಡಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿ ಕನಿಷ್ಠ ಮಟ್ಟದ ಜೀವನ ನಡೆಸುತ್ತಿದ್ದಾರೆ. ಬಂಡಲ ಪಂಚಾಯ್ತಿ ವ್ಯಾಪ್ತಿಯ ಸಂಪಕಟ್ಟಾ, ಸಾಳಕೊಪ್ಪ, ಪಟ್ಟಣಗದ್ದೆ, ದೇವಿಗದ್ದೆ, ತೋಟದಗದ್ದೆ, ತೆಂಗಾರು, ಬುಗುಡಿ ಹಳ್ಳಿಗಳಲ್ಲಿ ಸುಮಾರು 60 ಕುಟುಂಬಗಳು ನಾಗರಿಕ ಸೌಲಭ್ಯದಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು.  
ಈ ಹಳ್ಳಿಗಳಲ್ಲಿ ವಿದ್ಯುತ್, ಸರ್ವಋತು ರಸ್ತೆ ಇಲ್ಲದೆ ದಟ್ಟ ಅರಣ್ಯದಲ್ಲಿ ಜನರ ಬದುಕು ಅರಣ್ಯರೋದನವಾಗಿದೆ. ಈ ಕುಟುಂಬಗಳು ರಾತ್ರಿ ವೇಳೆ ವಿದ್ಯುತ್ ಬೆಳಕು ನೋಡಬೇಕಿದ್ದಲ್ಲಿ 6 ರಿಂದ 9 ಕಿ.ಮೀ. ದೂರದ ರಾಗಿಹೊಸಳ್ಳಿ ಗ್ರಾಮಕ್ಕೆ ಬರಬೇಕು. ರಸ್ತೆ  ಅವ್ಯವಸ್ಥೆಯಿಂದ ಕೂಡಿದ್ದು, ಹೊಂಡ, ತಗ್ಗುಗಳಿಂದ ಮಳೆಗಾಲದ ನಂತರ 6 ತಿಂಗಳು ರಸ್ತೆ ಸಂಚಾರದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ.
ಮುಂಡಗಾರ ಗ್ರಾಮಕ್ಕೆ 1982ರಲ್ಲಿ ವಿದ್ಯುತ್ ನೀಡುವ ಸಂಬಂಧ ಕಂಬ ಹುಗಿದು ವಿದ್ಯುತ್ ತಂತಿ ಅಳವಡಿಸಲಾಗಿತ್ತು. ಆದರೆ ವಿದ್ಯುತ್ ಮಾತ್ರ ಹರಿಯಲೇ ಇಲ್ಲ. ಹುಗಿದಲ್ಲಿಯೇ ಕಂಬಗಳು ಮುರಿದು, ತಂತಿಗಳು ಹರಿದು ಜೋತಾಡುವ ದೃಶ್ಯ ಇಂದಿಗೂ ಕಾಣಸಿಗುತ್ತದೆ. 1997ರಲ್ಲಿ ಮತ್ತೆ ವಿದ್ಯುತ್ ಸಂಪರ್ಕ ಮಂಜೂರಿಯಾಗಿದೆ ಎಂಬ ಸುದ್ದಿ ಬಂತು. ಗ್ರಾಮಸ್ಥರು ಶ್ರಮದಾನದಿಂದ ಗುಂಡಿ ತೆಗೆದರು. ಆ ಗುಂಡಿಗಳು ಇಂದಿಗೂ ರಸ್ತೆ ಪಕ್ಕದಲ್ಲಿ ಗೋಚರಿಸುತ್ತಿವೆ. ಬುಗುಡಿ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಸಂಪರ್ಕ ಕಥೆಯೂ ಇದೇ ರೀತಿಯಾಗಿದೆ. ವಿದ್ಯುತ್ ಸಂಪರ್ಕ ನೀಡಲು 1985ರಲ್ಲಿ ಕಂಬಗಳನ್ನು ಹುಗಿದದ್ದು ಇಂದಿಗೂ ಗ್ರಾಮಸ್ಥರ ತಾಳ್ಮೆ ಪರೀಕ್ಷಿಸುವಂತೆ ಕಂಡುಬರುತ್ತಿದೆ. ಗ್ರಾಮಸ್ಥರಲ್ಲಿ ಹೆಚ್ಚಿನವರು ಬಿಪಿಎಲ್ ಕಾರ್ಡ್‌ದಾರರು. ಪಡಿತರ ಸಾಮಗ್ರಿ ಪಡೆಯಲು ಗುಡ್ಡ, ದಿಣ್ಣೆ, ಹೊಂಡ ದಾಟಿ 6 ರಿಂದ 9 ಕಿ.ಮೀ. ದೂರದ ರಾಗಿಹೊಸಳ್ಳಿಗೆ ಬಂದು ಪಡಿತರ ಸಾಮಗ್ರಿ ಒಯ್ಯುವ ದಯನೀಯ ಪರಿಸ್ಥಿತಿ ಇದೆ. ರಾತ್ರಿ ವೇಳೆ ಅನಾರೋಗ್ಯಕ್ಕೆ ಒಳಗಾದರೆ ಅಂಥವರನ್ನು ಕಾಪಾಡುವುದು ಕಷ್ಟ. ಆರ್ಥಿಕವಾಗಿ ಸಾಮಾಜಿಕವಾಗಿ ದುರ್ಬಲರಾಗಿರುವ ಕುಟುಂಬಗಳು ಮೂರು ತಲೆಮಾರಿಗಿಂತ ಹಿಂದಿನಿಂದಲೂ ಇಲ್ಲಿ ಜೀವನ ನಡೆಸುತ್ತಿವೆ.  ಪ್ರತಿ ಪ್ರಜೆಗೂ ಸಂವಿಧಾನಬದ್ಧ ಹಕ್ಕು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದರೂ ಈ ಗ್ರಾಮಸ್ಥರು ಮಾತ್ರ ಹಕ್ಕಿನಿಂದ ವಂಚಿತರಾಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ 3 ದಶಕದಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಪ್ರತಿಫಲ ಇನ್ನೂ ಸಿಕ್ಕಿಲ್ಲ.  ಅತೀ ಶೀಘ್ರದಲ್ಲಿ ಸರ್ಕಾರ ನಮಗೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಹತ್ತು ದಿನಗಳಲ್ಲಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟಕ್ಕೆ ಅಣಿಯಾಗುವುದು ಅನಿವಾರ್ಯ ಎಂದು ಗ್ರಾಮಸ್ಥರು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯವಾದಿ ಎ. ರವೀಂದ್ರ ನಾಯ್ಕ, ಸ್ಥಳೀಯರಾದ ಬಾಬು ಯಂಕು ಮರಾಠಿ, ದಯಾನಂದ ನಾಯ್ಕ, ಗಣಪತಿ ಮರಾಠಿ, ತಿಮ್ಮಾ ಹುಲಿಯಾ ಗೌಡ ಮತ್ತಿತರರು ಇದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com