ಕುಮಟಾ: ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳಿಂದ ಶ್ರೀ ಕ್ಷೇತ್ರ ಗೋರೆಯಲ್ಲಿ ಏಪ್ರಿಲ್ 3ರಿಂದ 9ರ ವರೆಗೆ ಜರುಗಲಿರುವ ರಾಮಕಥಾ ಕಾರ್ಯಕ್ರಮಕ್ಕಾಗಿ ನಿರ್ಮಿಸಲಿರುವ ಬೃಹತ್ ವೇದಿಕೆಗೆ ದಿವಗಿಯ ಶ್ರೀ ರಾಮನಂದ ಸ್ವಾಮಿಗಳು ಭೂಮಿಪೂಜೆ ನೆರವೇರಿಸಿ, ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು. ಗೋರೆಯ ಸುಂದರ ನಿಸರ್ಗದಲ್ಲಿ ರಾಮಕಥಾ ಕಾರ್ಯಕ್ರಮಕ್ಕಾಗಿ 60 ಅಡಿ ಅಗಲದ ವೇದಿಕೆ ನಿಮಣವಾಗಲಿದೆ. ರಾಘವೇಶ್ವರ ಶ್ರೀಗಳು ಏ. 2ರಂದೇ ಗೋರೆಗೆ ಆಗಮಿಸಲಿದ್ದಾರೆ. ಭಕ್ತಾದಿಗಳ ಪಾಲಿಗೆ ಗೋರೆಯ ರಾಮಕಥಾ ಕಾರ್ಯಕ್ರಮ ಸ್ಮರಣಯವಾಗುವಂತೆ ಸಿದ್ಧತೆಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದರು. ಸುಬ್ರಾಯ ಭಟ್ಟ ದಂಪತಿ ಯಜಮಾನತ್ವದಲ್ಲಿ ಭೂಮಿ ಪೂಜೆ ನೆರವೇರಿಸಿ, ಅಡಿಗಲ್ಲನ್ನಿಡಲಾಯಿತು. ಗೋರೆ ಕ್ಷೇತ್ರ ಪ್ರಮುಖರಾದ ಎನ್.ಜಿ.ಪಿ. ಭಟ್ಟ, ಸುಬ್ರಹ್ಮಣ್ಯ ಭಟ್ಟ, ಹವ್ಯಕ ಮುಖಂಡರಾದ ಎಂ.ಕೆ. ಹೆಗಡೆ, ಡಾ ಜಿ.ಜಿ. ಹೆಗಡೆ, ಶ್ರೀಕಾಂತ ಪಂಡಿತ, ವಿನಾಯಕ ಭಟ್ಟ, ಸೀತಾರಾಮ ಜೋಶಿ, ವಿನೋದ ಭಟ್ಟ ಇದ್ದರು.