ಹೊನ್ನಾವರ: ತಾಲೂಕಿನ ಉಪ್ಪೋಣಿಯ ಸಂತಾನ ಗೋಪಾಲಕೃಷ್ಣ, ಶ್ರೀ ಮಹಾಗಣಪತಿ, ಶ್ರೀ ಶಾಂತಾದುರ್ಗಾದೇವಿ ಪುನರ್ ಪ್ರತಿಷ್ಠಾಪನೆ ದ್ವಿತೀಯ ವರ್ಧಂತ್ಯುತ್ಸವ ಮಾ. 2ರಂದು ನಡೆಯಲಿದೆ. ಬೆಳಗ್ಗೆ ಶ್ರೀದೇವತಾ ಪ್ರಾರ್ಥನೆ, ಧ್ವಜಾರೋಹಣ, ತತ್ವಕಲಾವೃದ್ಧಿ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣವ್ರತ, ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಮಹಾಬಲಿ, ಗ್ರಾಮದೇವತಾ ಬಲಿ, ರಾಜೋಪಚಾರ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದ್ದು, ರಾತ್ರಿ 10.30ಕ್ಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಆಡಳಿತ ಸಮಿತಿ ವಿನಂತಿಸಿದೆ.
ಕ್ಯಾಂಪಸ್ ಸಂದರ್ಶನ
ಭಟ್ಕಳ: ಶ್ರೀ ಗುರು ಸುಧೀಂದ್ರ ಬಿಸಿಎ ಮತ್ತು ಬಿಬಿಎ ಕಾಲೇಜಿನಲ್ಲಿ ಐಬಿಎಂ ಕಂಪನಿಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಮಾರ್ಚ್ 3ರಂದು ನಡೆಸಲಾಗುವುದು. ಅಂತಿಮ ವರ್ಷದ ಹಾಗೂ 2012ರಲ್ಲಿ ತೇರ್ಗಡೆ ಹೊಂದಿದ್ದ ಬಿಎ, ಬಿಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ, ಎಂಎ, ಎಂಕಾಂ, ಎಂ.ಎಸ್ಸಿ, ಎಂಸಿಎ ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಮಾರ್ಚ್ 3ರ ಬೆಳಗ್ಗೆ 9.30ಕ್ಕೆ ಕಾಲೇಜಿನಲ್ಲಿ ಹಾಜರಿರಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. 9342189755, 08385-222061 ಸಂಪರ್ಕಿಸಲು ಕೋರಲಾಗಿದೆ.
ಸ್ನೇಹ ಸಮ್ಮೇಳನ
ಭಟ್ಕಳ: ಆರ್ಯ ಈಡಿಗ ನಾಮದಾರಿ ನೌಕರರ ಸಂಘದ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು. ಸಮಾರಂಭವನ್ನು ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆರ್. ನಾಯ್ಕ ಉದ್ಘಾಟಿಸಿದರು. ಅತಿಥಿಗಳಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ನ್ಯೂ ಇಂಗ್ಲಿಷ್ ಸ್ಕೂಲ್ ಮುಖ್ಯೋಪಾಧ್ಯಾಯ ವಿ.ಜಿ. ನಾಯ್ಕ, ಹೆಸ್ಕಾಂನ ಸಹಾಯಕ ಅಭಿಯಂತರ ಮಂಜುನಾಥ ಕೆ.ಜಿ., ಭಟ್ಕಳ ಜಿಪಂನ ಮುಖ್ಯ ವ್ಯವಸ್ಥಾಪಕ ಕೆ.ಡಿ. ನಾಯ್ಕ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಾಂತಾರಾಮ ನಾಯ್ಕ ವಹಿಸಿ ಮಾತನಾಡಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ಆರ್. ನಾಯ್ಕ, ಹೆಸ್ಕಾಂನ ಸಹಾಯಕ ಎಂಜಿನಿಯರ್ ಶಿವಾನಂದ ನಾಯ್ಕ ಇದ್ದರು. ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡೆಯಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಚಂದ್ರಶೇಖರ ಸ್ವಾಗತಿಸಿದರು. ಶಿಕ್ಷಕ ಮೋಹನ ನಾಯ್ಕ ವರದಿ ವಾಚಿಸಿದರು. ಶಂಕರ ನಾಯ್ಕ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.