ಕನ್ನಡಪ್ರಭ ವಾರ್ತೆ, ಕಾರವಾರ, ಜ. 21
ಅಕ್ರಮ ಗಣಿಗಾರಿಕೆ, ಅನ್ಯಾಯದ ಭೂಸ್ವಾಧೀನ, ಭ್ರಷ್ಟಾಚಾರ ವಿರುದ್ಧ ಜನ ಸಂಗ್ರಾಮ ಪರಿಷತ್ನಿಂದ ಮತದಾರರ ಜಾಗೃತಿ ಜಾಥಾ ಜ. 22ರಿಂದ 25ರ ವರೆಗೆ ನಡೆಯಲಿದೆ ಎಂದು ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದ ಮಿತ್ರಸಮಾಜದಿಂದ ಜ. 22ರ ಬೆಳಗ್ಗೆ 8ಕ್ಕೆ ಜಾಗೃತಿ ಜಾಥಾ ಆರಂಭವಾಗಲಿದೆ. ಬೇಲೆಕೇರಿ, ಅಂಕೋಲಾ, ಯಲ್ಲಾಪುರ, ಕಲಘಟಗಿ, ಮನಗುಂಡಿ, ಧಾರವಾಡ, ಬೆಳಗಾವಿ, ಗದ್ದನಕೇರಿ ಕ್ರಾಸ್, ಇಳಕಲ್, ಕುಷ್ಟಗಿ, ಕಂಪ್ಲಿ ಮೂಲಕ ಬಳ್ಳಾರಿ ಸೇರಲಿದೆ. ಅಂದು ಬೆಳಗ್ಗೆ ಬಳ್ಳಾರಿಯಲ್ಲಿ 10.30ಕ್ಕೆ ಸಂಕಲ್ಪ ಸಭೆ ಹಾಗೂ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಬಳಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಜಾಥಾದ ಪ್ರಮುಖ ಉದ್ದೇಶವೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಹೊಡೆದು ಅಕ್ರಮವಾಗಿ ಸಂಪಾದಿಸಿದ ಹಣದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕ್ಷೀಣಗೊಳಿಸುತ್ತಿರುವ ಎಲ್ಲ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದು. ಮತದಾರರನ್ನು ಜಾಗೃತಿಗೊಳಿಸಿ ಹಣ, ಹೆಂಡ, ಸೀರೆ-ಪಂಚೆ ಇತ್ಯಾದಿ ಆಸೆಗೆ ಒಳಗಾಗದೇ ತಮ್ಮ ಪವಿತ್ರ ಮತಗಳನ್ನು ಸಾರ್ವಜನಿಕ ಹಿತಕ್ಕೆ ಮುಡುಪಿಡುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಕೊಡುವಂತೆ ಜಾಗೃತಿ ಮೂಡಿಸುವುದಾಗಿದೆ ಎಂದರು.
ಕೋಟ್ಯಂತರ ನಷ್ಟ: ಕರ್ನಾಟಕ ಸರ್ಕಾರ ಒಂದು ವರ್ಷದಿಂದ ಲೋಕಾಯುಕ್ತರನ್ನು ನೇಮಿಸಿಲ್ಲ. ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ , ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಡಿ.ಕೆ. ಶಿವಕುಮಾರ್ ಇನ್ನಿತರ ಪ್ರಮುಖರು ಸೇರಿದಂತೆ ಸರ್ಕಾರದ ಬೊಕ್ಕಸಕ್ಕೆ ರು. ಕೋಟ್ಯಂತರ ನಷ್ಟ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಿದ ಅವರಿಗೆ ಸಾರ್ವಜನಿಕ ಜೀವನದಲ್ಲಿ ಯಾವುದೇ ಸ್ಥಾನಮಾನ ನೀಡಬಾರದು. ಅವರಿಗೆ ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆಯಾಗಬೇಕು ಎಂದರು. ಈ ಸಂದರ್ಭದಲ್ಲಿ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕ್ರಿಯಾ ಸಮಿತಿ ಸಂಯೋಜಕ ರಾಘವೇಂದ್ರ ಕುಷ್ಟಗಿ, ಗ್ರಾಮ ಗಣರಾಜ್ಯ ವೇದಿಕೆಯ ಆರ್.ಬಿ. ಪಾಟೀಲ, ಸಮಾಜ ಪರಿವರ್ತನಾ ಸಮುದಾಯದ ವೀರಣ್ಣಾ ಜ್ಯೋತಿ, ಬಳ್ಳಾರಿ ಜನ ಸಂಗ್ರಾಮ ಪರಿಷತ್ ನ ಎಸ್. ಪನ್ನರಾಜ, ಪ್ರಮುಖರಾದ ಅಶೋಕ ಪೆಟ್ನೇಕರ, ಭಾವನಾ ಪಾಟೀಲ್, ಸರೋಜಾ ಹವಳದ್ ಮತ್ತಿತರರು ಇದ್ದರು.