ಯಲ್ಲಾಪುರ: ಮನುಷ್ಯನಾದವನಿಗೆ ಕಲೆಯನ್ನು ಆಸ್ವಾದಿಸಲು ಆಸಕ್ತಿ ಅಗತ್ಯವೇ ಹೊರತು, ಬಹು ಪ್ರಮಾಣದ ತಿಳಿವಳಿಕೆಯೇನು ಬೇಕಾಗಿಲ್ಲ ಎಂದು ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಹೇಳಿದರು.
ಅವರು ಶನಿವಾರ ಪಟ್ಟಣದ ತಾಪಂ ಆವಾರದ ಗಾಂಧಿ ಕುಟೀರದಲ್ಲಿ ಭಾರತಿ ನೃತ್ಯಕಲಾ ಕೇಂದ್ರ ದಶಮಾನೋತ್ಸವದ ಅಂಗವಾಗಿ ಏರ್ಪಡಿಸಲಾದ ವಿಚಾರ ಸಂಕಿರಣದ ನಿರ್ದೇಶಕರಾಗಿ ಮಾತನಾಡಿದರು.
ನಾವು ಭಾರತೀಯತ್ವ ಉಳಿಸಿಕೊಂಡರೆ ಮಾತ್ರ ಮನುಷ್ಯರಾಗಲು ಸಾಧ್ಯ. ಭಾರತೀಯತೆ ಉಳಿಯಲು ತಕ್ಕ ಪರಿಶ್ರಮ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಆಸಕ್ತಿ, ಗುರುಪ್ರೇಮ ಕೊರತೆಯಾಗುತ್ತಿದೆ ಎಂದರು. ಭರತನಾಟ್ಯದಂತಹ ಪಾವಿತ್ರ್ಯಪೂರ್ಣ ಕಲೆಯ ಬೆಳವಣಿಗೆಗೆ ಭಾರತೀಯತೆ ಯಾವ ಕಾರಣಕ್ಕೂ ಭಾರವೆನಿಸಬಾರದು ಎಂದರು.
ಪಠ್ಯಕ್ರಮದಲ್ಲಿ ಜೋಡಿಸಿ: ಶಾಸ್ತ್ರೀಯ ನೃತ್ಯವನ್ನು ಜನಮಾನಸಕ್ಕೆ ತಲುಪಿಸುವ ಮಾರ್ಗೋಪಾಯಗಳು ಎಂಬ ವಿಚಾರ ಕುರಿತು ತಮ್ಮ ನಿಲುವು ಮಂಡಿಸಿದ ಮೈಸೂರಿನ ನೃತ್ಯ ಸಂಪದದ ನಿರ್ದೇಶಕಿ, ನಾಟ್ಯ ವಿದುಷಿ ಎ.ಎಸ್. ಲಲಿತಾ ಮಾತನಾಡಿ, ಭರತನಾಟ್ಯ ಕಲೆ-ಮಡಿವಂತಿಕೆ ಬಿಡದೇ ಮೌಲ್ಯಗಳ ಜೊತೆ-ಜೊತೆಯಲ್ಲೇ ಬದಲಾವಣೆ ಹೊಂದುವುದು ಅಸಾಧ್ಯವೇನಲ್ಲ. ಪ್ರದರ್ಶನಕ್ಕೆ ಮುನ್ನ ಕಥಾಭಾಗದ ಸಂಕ್ಷಿಪ್ತ ನೋಟ ಒದಗಿಸಬಲ್ಲ ಟಿಪ್ಪಣಿ ಬಳಕೆ ಹಾಗೂ ಆಯಾ ಪ್ರದೇಶಗಳಿಗೆ ತಕ್ಕಂತಹ ಭಾಷೆಯನ್ನು ಬಳಸುವುದು ಔಚಿತ್ಯಪೂರ್ಣವಾದೀತು ಎಂದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವಿಷಯ ಮಂಡಿಸಿ, ಶ್ರೀಮಂತ ಕಲೆಯಾಗಿರುವ ಭರತನಾಟ್ಯ ಕಲೆ ಬಡವರ ಕೈಗೆಟುಕದಿರಲು ಈ ಕಲೆಗೆ ಅಗತ್ಯವಿರುವ ಅಲಂಕಾರ ಹಾಗೂ ಪ್ರಸಾದನ ಸಾಮಗ್ರಿಗಳು ಸುಲಭ ಸಾಧ್ಯವಾಗಿ ಕೊಳ್ಳಲಾಗದಿರುವುದೇ ಕಾರಣವಾಗಿದೆ ಎಂದರು.
ಸಹೃದಯತೆ ತೀರಾ ಕಡಿಮೆ: ವಿಶ್ವದರ್ಶನ ಪಪೂ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ್ ಮಾತನಾಡಿ, ನಮ್ಮ ಭಾರತೀಯ ಪ್ರೇಕ್ಷಕರಲ್ಲಿ ಮತ್ತು ಕಲಾತಜ್ಞರಲ್ಲಿ ಸಹೃದಯತೆ ತೀರಾ ಕಡಿಮೆ ಇದೆ. ಗಂಭೀರ ಅಧ್ಯಯನಶೀಲ ಪ್ರೇಕ್ಷಕರ ಕೊರತೆಯಿರುವ ಕಾರಣಕ್ಕಾಗಿ, ಕಲೆ ಆರಾಧನಾ ಸ್ವರೂಪ ಪಡೆಯದೇ ಇರುವುದರಿಂದ ಜನಮಾನಸದಲ್ಲಿ ಕಲೆ ನೆಲೆಯಾಗಿ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದರು. ಮೈಸೂರಿನ ನೃತ್ಯ ಸಂಪದದ ನಿರ್ದೇಶಕಿ, ನಾಟ್ಯ ವಿದುಷಿ ಎಸ್. ಕಾಂಚನಾ ಮಾತನಾಡಿ, ವಿದ್ಯಾರ್ಥಿಗಳಾದವರು ಕಲಿಕೆಯೊಂದಿಗೆ ಕಲೆಯ ಸರ್ವಾಂಗೀಣತೆಯ ಕಲ್ಪನೆ ಹೊಂದಿರಬೇಕಲ್ಲದೇ, ಪೂರ್ವ ರಂಗದ ಸಿದ್ಧತೆ ಅರಿತಿರಬೇಕೆಂದು ಅಭಿಪ್ರಾಯಪಟ್ಟರು. ನ್ಯಾಯವಾದಿ ಎನ್.ಕೆ. ಭಾಗ್ವತ ಸ್ವಾಗತಿಸಿದರು. ವಿಷ್ಣುಮೂರ್ತಿ ಭಟ್ಟ ಕಲಾವಿದರ ಪರಿಚಯ ಮಾಡಿದರು. ಲಕ್ಷ್ಮೀ ಭಟ್ಟ ಚಿಮ್ನಳ್ಳಿ ನಿರ್ವಹಿಸಿದರು.