ಯಲ್ಲಾಪುರ: ನಗರವಾಸಿಗಳಿಗಿಂತ ಅರಣ್ಯವಾಸಿಗಳಲ್ಲೇ ಧರ್ಮ, ಸಂಸ್ಕೃತಿ, ಪರಂಪರೆ ಉಳಿದಿದೆ. ಆ ದೃಷ್ಟಿಯಲ್ಲಿ ನಮ್ಮ ಈ ಪ್ರದೇಶದ ಸಿದ್ದಿ, ದನಗರ ಗೌಳಿ, ಕುಣಬಿ, ಮರಾಠಿ ಸಮಾಜದವರು ಪರಂಪರೆಯಿಂದ ಶ್ರೀ ಮಠದ ಶಿಷ್ಯರಾಗಿ ಬಂದಿದ್ದಾರೆ. ಇಂದು ಮುಂದು ಮಠದ ಶಿಷ್ಯರೆಂಬುದರಲ್ಲಿ ಅನುಮಾನವಿಲ್ಲ. ನಾವು ನಮ್ಮತನದ ಬಗ್ಗೆ ನಿಷ್ಠೆ ಉಳಿಸಿಕೊಳ್ಳಬೇಕು, ಸದಾಚಾರವಂತರಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಅವರು ನಾಯಕನಕೆರೆಯ ಶಾರಾದಾಂಬಾ ದೇವಸ್ಥಾನದಲ್ಲಿ ಸಿದ್ದಿ, ದನಗರ ಗೌಳಿ, ಕುಣಬಿ, ಮರಾಠಿ ಸಮುದಾಯದವರ ಧರ್ಮ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಸಮನ್ವಯತೆ ಕೊರತೆ: ಸರ್ಕಾರದ ಇಲಾಖೆಗಳಾದ ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಸಮನ್ವಯತೆ ಕೊರತೆ ಇದೆ. ಅದರಲ್ಲೂ ಸಮಾಜ ಕಲ್ಯಾಣ ಇಲಾಖೆ ಕಾರ್ಯ ತೃಪ್ತಿಕರವಾಗಿಲ್ಲ. ಜಿಲ್ಲೆಯಲ್ಲಂತೂ ಸರಿಯಾದ ಅಸ್ತಿತ್ವವೇ ಇಲ್ಲ. ಅದಕ್ಕೆ ಮಂತ್ರಿಗಳ ನಿಯಂತ್ರಣ ಇಲ್ಲದಿರುವುದೇ ಕಾರಣ ಎಂದ ಶ್ರೀಗಳು ಅರಣ್ಯ ಹಕ್ಕು ಕಾನೂನು ಜಾರಿ ಬಂದು ಅನೇಕ ವರ್ಷಗಳು ಕಳೆದರೂ ಪಾರಂಪರಿಕ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಅದು ಅತ್ಯಂತ ಶೀಘ್ರದಲ್ಲಿ ಆಗಬೇಕಾಗಿದೆ ಎಂದರು. ನ್ಯಾಯವಾದಿ ಜಿ.ಎಸ್. ಭಟ್ಟ ಹಳವಳ್ಳಿ ಮಾತನಾಡಿ, ಭಾರತ ವಿಶ್ವಕ್ಕೆ ನೀತಿ-ಬೋಧನೆ, ಸಂಸ್ಕೃತಿ ಎಲ್ಲವನ್ನು ನೀಡಿದ ಗುರುಸ್ಥಾನದಲ್ಲಿದೆ. ಭಾರತ ಜಾತ್ಯತೀತ ಪರಿಕಲ್ಪನೆಯಿಂದ ಬೆಳೆದು ಬಂದಿದೆ. ಸಂವಿಧಾನದ ಚೌಕಟ್ಟಿನಲ್ಲೇ ಧರ್ಮ ಜಾಗೃತಿ ನಡೆಯಬೇಕು ಎಂದರು.
ಮಾಹಿತಿ: ವನವಾಸಿ ಕಲ್ಯಾಣ ಹಾಗೂ ಧರ್ಮ ಜಾಗೃತಿ ರಾಜ್ಯ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ವನವಾಸಿಗಳ-ಅರಣ್ಯವಾಸಿಗಳ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಮುಂಡಗೋಡಿನ ಹನುಮಾಪುರದ ಶ್ರೀ ಕಾಳಿಕಾಂಬಾ ಮಠದ ಶ್ರೀ ಸದಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಗರಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಭಾಗ್ವತ್, ಗ್ರಾಮಾಭ್ಯುದಯ ಸಂಸ್ಥೆ ಕಾರ್ಯದರ್ಶಿ ಎಂ.ಸಿ. ಹೆಗಡೆ ಶಿರಸಿಮಕ್ಕಿ, ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್.ಎಚ್. ನಾಯ್ಕ, ಗೌಳಿಗರ ಮುಖಂಡ ಸೋನು ಪಾಂಡ್ರಮಿಶೆ, ಜೀವನ ವಿಕಾಸ ಟ್ರಸ್ಟ್ನ ಸಣ್ಯಾ ಸಿದ್ದಿ, ಕುಣಬಿ ಸಮಾಜದ ಮುಖಂಡ ಪುಟ್ಟು ಕುಣಬಿ, ವನವಾಸಿ ಮುಖಂಡ ಪರಶುರಾಮ ಸಿದ್ದಿ, ಸೋನು ದೋಹಿಪಡೆ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಸಂಚಾಲಕ ಎಸ್.ಎನ್. ಭಟ್ಟ ಸ್ವಾಗತಿಸಿದರು. ವಿವಿಧ ಸಮಾಜದ ಮುಖಂಡರು ಸಮಾಜದ ಕುಂದುಕೊರತೆ ಕುರಿತಾಗಿ ಮಾಹಿತಿ ನೀಡಿದರು. ವನವಾಸಿ ಪ್ರಮುಖರಾದ ಶಾಂತಾರಾಮ ಸಿದ್ದಿ ನಿರ್ವಹಿಸಿದರು. ಧರ್ಮ ಜಾಗರಣದ ಜಿಲ್ಲಾ ಸಂಚಾಲಕ ವಂದಿಸಿದರು.