ವಸಂತಕುಮಾರ್ ಕತಗಾಲ
ಕನ್ನಡಪ್ರಭ ವಾರ್ತೆ, ಕಾರವಾರ, ಜ. 22
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಚುನಾವಣಾ ತಾಲೀಮು ಆರಂಭಿಸಿದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮತದಾರರ ಸಂಖ್ಯೆ 10,21,905ಕ್ಕೇರಿದೆ.
ಹಳಿಯಾಳ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರ ಹಳಿಯಾಳ ಹಾಗೂ ಜೋಯಿಡಾ ತಾಲೂಕುಗಳನ್ನು ಒಳಗೊಂಡಿದೆ. ಕ್ಷೇತ್ರದ ಒಟ್ಟೂ ಮತದಾರರ ಸಂಖ್ಯೆ 1,53,450 ಆಗಿದೆ. ಇದರಲ್ಲಿ ಜೋಯಿಡಾ ತಾಲೂಕಿನ ಮತದಾರರು 37,938 ಆದರೆ ಹಳಿಯಾಳ ತಾಲೂಕಿನ ಮತದಾರರು 1,15,512 ಆಗಿದ್ದಾರೆ.
ಕಾರವಾರ- ಅಂಕೋಲಾ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರ ಕಾರವಾರ ಹಾಗೂ ಅಂಕೋಲಾ ತಾಲೂಕುಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,99,953 ಆಗಿದೆ. ಇದರಲ್ಲಿ ಕಾರವಾರ ತಾಲೂಕಿನಲ್ಲಿ 1,16,470 ಮತದಾರರಿದ್ದರೆ, ಅಂಕೋಲಾ ತಾಲೂಕಿನಲ್ಲಿ 83,483 ಮತದಾರರಿದ್ದಾರೆ.
ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರದಲ್ಲಿ ಸಂಪೂರ್ಣ ಕುಮಟಾ ತಾಲೂಕು ಹಾಗೂ ಹೊನ್ನಾವರ ತಾಲೂಕಿನ ಭಾಗಶಃ ಪ್ರದೇಶ ಒಳಗೊಂಡಿದೆ. ಕ್ಷೇತ್ರದ ಒಟ್ಟೂ ಮತದಾರರ ಸಂಖ್ಯೆ 1,64,585 ಕ್ಕೇರಿದೆ. ಇದರಲ್ಲಿ ಕುಮಟಾ ತಾಲೂಕಿನ 1,15,665 ಮತದಾರರಿದ್ದರೆ, ಹೊನ್ನಾವರ (ಭಾಗಶಃ) ತಾಲೂಕಿನ 48,920 ಮತದಾರರಿದ್ದಾರೆ.
ಭಟ್ಕಳ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರದಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕಿನ ಭಾಗಶಃ ಪ್ರದೇಶ ಒಳಗೊಂಡಿದೆ. ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,84,511ಕ್ಕೇರಿದೆ. ಭಟ್ಕಳ ತಾಲೂಕಿನಲ್ಲಿ 1,07,531 ಮತದಾರರಿದ್ದರೆ, ಹೊನ್ನಾವರ (ಭಾಗಶಃ ) ತಾಲೂಕಿನ 76,980 ಮತದಾರರು ಇದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರ: ಈ ಕ್ಷೇತ್ರ ಶಿರಸಿ ತಾಲೂಕಿನ ಭಾಗಶಃ ಪ್ರದೇಶ ಹಾಗೂ ಸಿದ್ದಾಪುರ ತಾಲೂಕನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,70,312 ಆಗಿದೆ. ಶಿರಸಿ ತಾಲೂಕಿನ (ಭಾಗಶಃ) ಮತದಾರರ ಸಂಖ್ಯೆ 95,471 ಆಗಿದ್ದರೆ, ಸಿದ್ದಾಪುರ ತಾಲೂಕಿನ 74,841 ಮತದಾರರಿದ್ದಾರೆ.
ಯಲ್ಲಾಪುರ ವಿಧಾನಸಭೆ ಕ್ಷೇತ್ರ: ಈ ಕ್ಷೇತ್ರದಲ್ಲಿ ಯಲ್ಲಾಪುರ-ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಭಾಗಶಃ ಪ್ರದೇಶ ಒಳಗೊಳ್ಳಲಿದೆ. ಈ ಕ್ಷೇತ್ರದಲ್ಲಿ ಒಟ್ಟೂ ಮತದಾರರ ಸಂಖ್ಯೆ 1,49,094 ರಷ್ಟಾಗಿದೆ. ಇದರಲ್ಲಿ ಮುಂಡಗೋಡ ತಾಲೂಕಿನ ಮತದಾರರ ಸಂಖ್ಯೆ 58,791 ರಷ್ಟಾದರೆ, ಯಲ್ಲಾಪುರ ತಾಲೂಕಿನ ಮತದಾರರ ಸಂಖ್ಯೆ 56,587 ಆಗಿದೆ ಹಾಗೂ ಶಿರಸಿ ತಾಲೂಕಿನ ಭಾಗಶಃ ಮತದಾರರ ಸಂಖ್ಯೆ 33,716ರಷ್ಟಿದೆ.
ರಾಷ್ಟ್ರೀಯ ಮತದಾರರ ದಿನ: ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಆದರೆ ಮತದಾರರ ಅಂತಿಮ ಪಟ್ಟಿ ಸಿದ್ಧಗೊಂಡಿದ್ದರೂ ಇನ್ನೂ ಮತದಾರರ ಹೆಸರುಗಳು ಸೇರ್ಪಡೆಯಾಗುತ್ತಲೇ ಇದೆ. ಹಾಗಾಗಿ ಪರಿಷ್ಕೃತ ಪಟ್ಟಿ ಸಿದ್ಧಗೊಳ್ಳಲು ಇನ್ನೂ ಸಮಯ ಬೇಕಾಗಿದೆ.